ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಪುಣ್ಯ ಭೂಮಿ ಉಳಿವಿಗಾಗಿ ಡಿಸೆಂಬರ್ 17 ರಂದು ನಡೆಯಲಿರುವ ಹೋರಾಟಕ್ಕೆ ಕಿಚ್ಚ ಸುದೀಪ್ ಬೆಂಬಲ ನೀಡಲಿದ್ದಾರೆ.
ವಿಷ್ಣುವರ್ಧನ್ ಅಭಿಮಾನಿ, ವಿಷ್ಣುಸೇನಾ ಸಮಿತಿ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಡಿಸೆಂಬರ್ 17 ರಂದು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಇದರಲ್ಲಿ ರಾಜ್ಯದ ಮೂಲೆ ಮೂಲೆಯಿಂದ ವಿಷ್ಣು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಅಭಿಮಾನ್ ಸ್ಟುಡಿಯೋ ಜಾಗದಲ್ಲಿರುವ ವಿಷ್ಣುವರ್ಧನ್ ಪುಣ್ಯ ಭೂಮಿ ಉಳಿಸಿಕೊಳ್ಳಲು ಈ ಹೋರಾಟ ನಡೆಯುತ್ತಿದೆ. ವಿಷ್ಣು ಸಮಾಧಿ ಸ್ಥಳವನ್ನು ನೆಲಸಮ ಮಾಡುವ ಹುನ್ನಾರ ನಡೆದಿದೆ. ಇತ್ತೀಚೆಗೆ ನಮಗೆ ಅಲ್ಲಿ ವಿಷ್ಣು ಪುಣ್ಯ ತಿಥಿಯಂದು ಹೋಗಲೂ ಬಿಡುತ್ತಿಲ್ಲ ಎಂದು ವೀರಕಪುತ್ರ ಶ್ರೀನಿವಾಸ್ ಆರೋಪಿಸಿದ್ದರು.
ಇದೇ ಕಾರಣಕ್ಕೆ ಡಿಸೆಂಬರ್ 17 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಹೋರಾಟಕ್ಕೆ ಕಿಚ್ಚ ಸುದೀಪ್ ಕೂಡಾ ಬೆಂಬಲ ನೀಡಿದ್ದಾರೆ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.