ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ಈ ನಡುವೆ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ತಮ್ಮ ಕಾಲಿನ ಅವಸ್ಥೆ ಏನಾಗಿತ್ತು ಎಂಬುದನ್ನು ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಾಂತಾರ ಎನ್ನುವ ಎರಡು ಭಾಗಗಳ ಸಿನಿಮಾಗಾಗಿ ರಿಷಬ್ ತಮ್ಮ ಜೀವನದ ಐದು ವರ್ಷಗಳನ್ನು ವ್ಯಯಿಸಿದ್ದಾರೆ. ಅದರಲ್ಲೂ ಕಾಂತಾರ ಚಾಪ್ಟರ್ 1 ಕ್ಕಾಗಿ ಮೂರು ವರ್ಷಗಳನ್ನು ಮೀಸಲಿಟ್ಟಿದ್ದರು. ಈ ಸಮಯದಲ್ಲಿ ಅವರು ತಾವೇ ಸ್ಕ್ರಿಪ್ಟ್ ಬರೆದು, ನಿರ್ದೇಶನ ಮಾಡಿ, ಸಿನಿಮಾಗಾಗಿ ಕಳರಿ ಪಯಟ್ಟು ಕಲಿತು ಸಾಕಷ್ಟು ಶ್ರಮ ಪಟ್ಟಿದ್ದಾರೆ.
ಅದರಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ದೈವದ ಅವತಾರದಲ್ಲಿ ರಿಷಬ್ ಪ್ರಚಂಡ ಫೈಟ್ ಮಾಡಿದ್ದಾರೆ. ಈ ಸಾಹಸದ ಸನ್ನಿವೇಶದ ಬಳಿಕ ರಿಷಬ್ ಕಾಲುಗಳು ಊದಿಕೊಂಡಿತ್ತು. ಈ ಫೋಟೋಗಳನ್ನು ರಿಷಬ್ ಹಂಚಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯ ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ.. ಈವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದಿದ್ದಾರೆ.