ಬೆಂಗಳೂರು: ನ್ಯಾಷನಲ್ ಕೃಷ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ಮನೋಜ್ಞವಾಗಿ ಅಭಿನಯಿಸಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ದಿ ಗರ್ಲ್‌ಫ್ರೆಂಡ್ ಚಿತ್ರ ಒಟಿಟಿಗೆ ಎಂಟ್ರಿಯಾಗಿದೆ.
ನವೆಂಬರ್ 7ರಂದು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಸಿನಿಮಾ ನೆಟ್‌ಫ್ಲಿಕ್ಸ್ ಮೂಲಕ ಒಟಿಟಿಗೆ ಲಗ್ಗೆ ಇಟ್ಟಿದೆ.
ಚಿತ್ರಮಂದಿರಗಳಲ್ಲಿ ಸುಮಾರು ₹30 ಕೋಟಿ ಚಾಚಿಕೊಂಡ ಈ ಸಿನಿಮಾ ಪ್ರೇಕ್ಷಕರಿಂದ ಹಾಗೂ ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದರಲ್ಲೂ ವಿಶೇಷವಾಗಿ ರಶ್ಮಿಕಾ ಮಂದಣ್ಣ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದರು.
ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡ ನಿರೂಪಣೆ ಮತ್ತು ರಶ್ಮಿಕಾ ಅವರ ಅತ್ಯುತ್ತಮ ಅಭಿನಯದ ಮೂಲಕ ಈ ಚಿತ್ರ ಪ್ರೇಕ್ಷಕರನ್ನು ಸೆಳೆದಿತ್ತು. ಇದೀಗ ಚಿತ್ರದ ಒಟಿಟಿ ಪ್ರಸಾರದ ಹಕ್ಕನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇಂದಿನಿಂದ ಸ್ಟ್ರೀಮಿಂಗ್ ಆಗಲಿದೆ. ಒಟಿಟಿ ವೇದಿಕೆಯಲ್ಲಿ ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.
ರಾಹುಲ್ ರವೀಂದ್ರನ್ ನಿರ್ದೇಶನದ ದಿ ಗರ್ಲ್‌ಫ್ರೆಂಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರೆ, ದೀಕ್ಷಿತ್ ಶೆಟ್ಟಿ ನಾಯಕನಾಗಿದ್ದಾರೆ. ಅನು ಎಮ್ಯಾನುಯೆಲ್ ಮತ್ತು ರಾವ್ ರಮೇಶ್‌ರಂತಹ ನಟರು ಸಿನಿಮಾದ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.