Publish Date: Sat, 07 Jun 2025 (11:09 IST)
Updated Date: Sat, 07 Jun 2025 (11:14 IST)
ಬೆಂಗಳೂರು: ಕಮಲ್ ಹಾಸನ್ ಬಳಿಕ ಈಗ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಸಿನಿಮಾಗಳನ್ನು ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರು ಎಂದಿದ್ದಾರೆ.
ಇತ್ತೀಚೆಗೆ ಕಮಲ್ ಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ಕಾರಣಕ್ಕೆ ಕಮಲ್ ಸಿನಿಮಾ ಥಗ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ನಿಷೇಧ ಹೇರಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಮ್ ಗೋಪಾಲ್ ವರ್ಮ ಇದು ಹೊಸ ರೀತಿಯ ಗೂಂಡಾಗಿರಿ ಎಂದಿದ್ದರು.
ಇದೀಗ ಅಣ್ಣಾವ್ರು ಡಾ ರಾಜ್ ಕುಮಾರ್ ಬಗ್ಗೆಯೇ ನಾಲಿಗೆ ಹರಿಬಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ 70-80 ರ ದಶಕದಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ಅನೇಕರು ಹೆಸರು ಮಾಡಿದರು. ರಜನೀಕಾಂತ್, ಚಿರಂಜೀವಿ, ರಾಜ್ ಕುಮಾರ್ ಅವರಂತಹ ನಟರು ಈ ರಿಮೇಕ್ ಗಳ ಮೂಲಕ ಜನಪ್ರಿಯತೆ ಪಡೆದರು. 90 ರ ದಶಕದಲ್ಲಿ ಬಚ್ಚನ್ ಐದು ವರ್ಷ ಬ್ರೇಕ್ ತೆಗೆದುಕೊಂಡರು. ಆಗ ದಕ್ಷಿಣದ ನಟರು ಅವರ ಸಿನಿಮಾಗಳಂತೆ ಮಸಾಲಾ ರೀತಿಯಲ್ಲಿ ಕತೆ ಹೇಳುವುದನ್ನು ಮುಂದುವರಿಸಿದರು ಎಂದಿದ್ದಾರೆ.
ಡಾ ರಾಜ್ ಪೌರಾಣಿಕ ಕತೆಗಳು, ಕಾದಂಬರಿ ಆಧಾರಿತ ಕತೆಗಳ ಸಿನಿಮಾಗಳನ್ನೇ ಮಾಡುತ್ತಿದ್ದವರು. ಅವರ ಬಗ್ಗೆ ಇಂತಹ ಕ್ಷುಲ್ಲುಕ ಹೇಳಿಕೆ ನೀಡಿರುವ ರಾಮ್ ಗೋಪಾಲ್ ವರ್ಮಾ ಬಗ್ಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗಿದೆ.