Publish Date: Thu, 05 Jun 2025 (08:31 IST)
Updated Date: Thu, 05 Jun 2025 (08:41 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಘಟನೆ ಈ ಹಿಂದೆ ಅಣ್ಣಾವ್ರು ತೀರಿಕೊಂಡಾಗಲೂ ನಡೆದಿತ್ತು. ಆಗಲೂ ಅಭಿಮಾನಿಗಳು ಸಾಗರದಂತೆ ನುಗ್ಗಿದಾಗ ಪೊಲೀಸರು ಅಸಹಾಯಕರಾದರು.
ಐಪಿಎಲ್ ಗೆದ್ದು ಆರ್ ಸಿಬಿ ತವರಿಗೆ ಬರುತ್ತದೆ ಎಂದಾಗ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸಾವಿರ ಸಂಖ್ಯೆಯಲ್ಲಿ ಬರಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅಭಿಮಾನಿಗಳ ಸಂಖ್ಯೆ ಲಕ್ಷ ದಾಟಿತ್ತು. ಅದೂ ಮೈದಾನಕ್ಕೆ ಉಚಿತ ಪಾಸ್ ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿದಾಗ ಅಭಿಮಾನಿಗಳು ಹುಚ್ಚೆದ್ದು ನುಗ್ಗಿದರು.
ಮೈದಾನಕ್ಕೆ ಅಭಿಮಾನಿಗಳನ್ನು ಬಿಡಲು ಸೂಕ್ತ ವ್ಯವಸ್ಥೆ ಮಾಡಲಿಲ್ಲ. ಸಾಮಾನ್ಯವಾಗಿ ಪಂದ್ಯ ನಡೆಯುವಾಗ ಟಿಕೆಟ್ ಪರಿಶೀಲಿಸಿ ಒಬ್ಬೊಬ್ಬರನ್ನೇ ಒಳಗೆ ಬಿಡಲಾಗುತ್ತದೆ. ಆದರೆ ಈಗ ಹಾಗೆ ಮಾಡದೇ ಒಟ್ಟಿಗೇ ಜನ ನುಗ್ಗಿದ್ದರಿಂದ ದುರಂತ ಸಂಭವಿಸಿದೆ.
ಏಕಾಏಕಿ ಲಕ್ಷಾಂತರ ಮಂದಿ ಅಭಿಮಾನಿಗಳು ನುಗ್ಗಿದಾಗ ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರೂ ಏನೂ ಮಾಡಲಾಗಲಿಲ್ಲ. ಈ ಹಿಂದೆ ಡಾ. ರಾಜ್ ಕುಮಾರ್ ತೀರಿಕೊಂಡಾಗಲೂ ಪೊಲೀಸರಿಗೆ ಇದೇ ಅಸಹಾಯಕತೆ ಎದುರಾಗಿತ್ತು. ಏಕಾಏಕಿ ಅಭಿಮಾನಿ ದೇವರುಗಳು ನುಗ್ಗಿ ಬಂದಾಗ ಏನು ಮಾಡಬೇಕೆಂದು ತಿಳಿಯದೇ ಪೊಲೀಸರು ಅಸಹಾಯಕರಾಗಿ ಕೈ ಚೆಲ್ಲಿ ಕೂತರು. ಈಗಲೂ ಅದೇ ಸಮಸ್ಯೆ ಎದುರಾಗಿದೆ. ಈ ಘಟನೆ ಪೊಲೀಸರಿಗೆ, ಆಯೋಜಕರಿಗೆ ಮತ್ತು ಸರ್ಕಾರಕ್ಕೆ ಒಂದು ಪಾಠವಾಗಲಿದೆ.