Publish Date: Fri, 21 Jun 2024 (11:44 IST)
Updated Date: Fri, 21 Jun 2024 (11:55 IST)
ಬೆಂಗಳೂರು: ಮಲಯಾಳಂನಲ್ಲಿ ಟರ್ಬೋ ಸಿನಿಮಾ ಬಳಿಕ ರಾಜ್ ಬಿ ಶೆಟ್ಟಿ ಪರಭಾಷೆಯಲ್ಲೇ ಸೆಟ್ಲ್ ಆಗುತ್ತಾರೇನೋ ಎಂದು ಕನ್ನಡಿಗರು ಅಂದುಕೊಂಡಿದ್ದರು. ಆದರೆ ಈಗ ರಾಜ್ ಬಿ ಶೆಟ್ಟಿ ಹೊಸ ಕತೆಯೊಂದಕ್ಕೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ರಾಜ್ ಬಿ ಶೆಟ್ಟಿ ನಾಯಕರಾಗಿ ಕನ್ನಡದಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾವೆಂದರೆ ಸ್ವಾತಿ ಮುತ್ತಿನ ಮಳೆ ಹನಿಯೆ. ಇದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ ಇದು ರಾಜ್ ಬಿ ಶೆಟ್ಟಿಗೆ ಅಷ್ಟೊಂದು ಯಶಸ್ಸು ಕೊಡಲಿಲ್ಲ. ಇದಕ್ಕೆ ಮೊದಲು ಬಿಡುಗಡೆಯಾಗಿದ್ದ ಟೋಬಿ ಸಿನಿಮಾವೂ ನಿರೀಕ್ಷಿಸಿದಷ್ಟು ಯಶಸ್ಸು ಕೊಡಲಿಲ್ಲ.
ಈ ಹಿನ್ನಲೆಯಲ್ಲಿ ರಾಜ್ ಬಿ ಶೆಟ್ಟಿ ಮಲಯಾಳಂನಲ್ಲಿ ಸೂಪರ್ ಸ್ಟಾರ್ ಮಮ್ಮುಟ್ಟಿ ಜೊತೆಗಿನ ಟರ್ಬೊ ಸಿನಿಮಾದಲ್ಲಿ ಅವಕಾಶ ಪಡೆದಿದ್ದರು. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಖಡಕ್ ವಿಲನ್ ಪಾತ್ರ ಮಾಡಿದ್ದರು. ಈ ಪಾತ್ರಕ್ಕೆ ಮಲಯಾಳಿ ಪ್ರೇಕ್ಷಕರಿಂದ ಅವರಿಗೆ ಮೆಚ್ಚುಗೆಯೂ ಸಿಕ್ತು. ಹೀಗಾಗಿ ಮುಂದೆ ರಾಜ್ ಬಿ ಶೆಟ್ಟಿ ಪರಭಾಷೆಗಳತ್ತ ಹಾರಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು.
ಈ ನಡುವೆ ರಾಜ್ ಬಿ ಶೆಟ್ಟಿ ತಮ್ಮ ಲಾಫಿಂಗ್ ಬುದ್ಧ ಕ್ರಿಯೇಷನ್ ನಡಿ ಹೊಸ ಸಿನಿಮಾದಲ್ಲಿ ನಟಿಸಲು ನಟರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸದ್ಯದಲ್ಲೇ ಹೊಸ ಕತೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇನೆ ಎಂದಿದ್ದಾರೆ. ಇದು ಕನ್ನಡದಲ್ಲಿ ನಿರ್ಮಾಣವಾಗಲಿರುವ ಸಿನಿಮಾ. ಹೀಗಾಗಿ ರಾಜ್ ಬಿ ಶೆಟ್ಟಿ ಪಕ್ಕದ ಕೇರಳಕ್ಕೆ ಹೋಗಿ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅಭಿಮಾನಿಗಳೂ ಇದಕ್ಕೆ ಪ್ರತಿಕ್ರಿಯಿಸಿದ್ದು ಗರುಡ ಗಮನ ವೃಷಭ ವಾಹನ ಭಾಗ 2 ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.