ಮೈಸೂರು: ಖ್ಯಾತ ನಟ ಪ್ರಕಾಶ್ ರಾಜ್ ಅವರು ಬಿಗ್‌ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೊಟೋ ಹರಿಬಿಡುತ್ತಿರುವುದರ ವಿರುದ್ಧ ನಟ ಪ್ರಕಾಶ್ ರಾಜ್ ಅವರು ಪ್ರಶಾಂತ್ ಸಂಬರಗಿ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕಾಶ್ ರಾಜ್ ಕೊಟ್ಟ ದೂರಿನಲ್ಲಿ ಏನಿದೆ: 'ಪ್ರಶಾಂತ್ ಸಂಬರಗಿ ಅವರು ನನ್ನ ಖ್ಯಾತಿಗೆ ಕುತ್ತು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಫೇಸ್‌ಬುಕ್‌ನಲ್ಲಿ ನನ್ನ ಹೆಸರು ಬಳಸಿ ಕೃತಕ ಬುದ್ದಿಮತ್ತೆಯ ಮೂಲಕ ಸೃಷ್ಟಿಸಿದ ಭಾವಚಿತ್ರ ಬಳಸಿದ್ದು, ಸುಳ್ಳು ಶೀರ್ಷಿಕೆ ನೀಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರತಿಕ್ರಿಯಿಸಿ, ಪ್ರಶಾಂತ್ ಸಂಬರಗಿ ಅವರಿಗೆ ಇ ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಪ್ರಶಾಂತ್ ಸಂಬರುಗಿ ನಟಿಯರು ಸೇರಿದಂತೆ ಅನೇಕರಿಗೆ ತೊಂದರೆ ನೀಡಿದ್ದು, ಪಾಠ ಕಲಿಸುವ ಸಲುವಾಗಿ ದೂರು ನೀಡಿದ್ದೇನೆ ಎಂದರು.