ಬೆಂಗಳೂರು: ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮರಳಿದ ಶಿವಣ್ಣ ಬಿ ಗಣಪತಿ ಜೊತೆಗಿನ ಸಂದರ್ಶನದಲ್ಲಿ ಮನದಾಳ ಬಿಚ್ಚಿಟ್ಟಿದ್ದಾರೆ. ನಾನು ಗೀತಾಳಂತಹ ಪತ್ನಿಯನ್ನು ಪಡೆಯಲು ಅರ್ಹನಾ ಅನಿಸಿಬಿಡುತ್ತೆ ಕೆಲವೊಮ್ಮೆ ಎಂದು ಭಾವುಕರಾಗಿದ್ದಾರೆ.
ತಮ್ಮ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ, ತಾವು ಎದುರಿಸಿದ ಸಂಘರ್ಷಗಳ ಬಗ್ಗೆ ಖ್ಯಾತ ಸಿನಿಮಾ ಪತ್ರಕರ್ತ ಬಿ ಗಣಪತಿ ಜೊತೆಗಿನ ಯೂ ಟ್ಯೂಬ್ ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಮನದಾಳವನ್ನು ಹಂಚಿಕೊಂಡಿದ್ದಾರೆ.
ನನಗೆ ಇಂತಹದ್ದೊಂದು ಖಾಯಿಲೆಯಿದೆ ಎಂದು ಗೊತ್ತಾದಾಗ ನನಗೇ ಯಾಕೆ ಹೀಗಾಯಿತು, ಹೇಗೆ ಪ್ರತಿಕ್ರಿಯಿಸಬೇಕು, ಅಳಬೇಕೋ ಏನು ಮಾಡಬೇಕು ಎಂದೇ ಗೊತ್ತಾಗಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಈ ಖಾಯಿಲೆ ಇದೆ ಎಂದು ಗೊತ್ತಾದಾಗ ಬೇಗನೇ ನನ್ನ ಕೆಲಸ ಮುಗಿಸಿಬಿಡೋಣ ಎನಿಸಿತು. 45 ಸಿನಿಮಾ, ಕೆಲವೊಂದು ಶೋ, ಜಾಹೀರಾತುಗಳು ಬಾಕಿಯಿತ್ತು. ಸಾಕು, ಅದೆಲ್ಲವನ್ನೂ ಮಾಡಿ ಮುಗಿಸೋಣ, ಸಾಕು ಎನಿಸಿತ್ತು. ಮೂರು ಬಾರಿ ಕೀಮೋಥೆರಪಿ ಮಾಡಿದ ಮೇಲೆ ಸ್ವಲ್ಪ ಭರವಸೆ ಬಂತು. ನನಗೆ ಶಕ್ತಿಯಾಗಿ ನಿಂತಿದ್ದು ಗೀತಾ. ನನಗೆ ಒಬ್ಬ ಪತ್ನಿಯಾಗಿ, ಗೆಳತಿಯಾಗಿ ಜೊತೆಯಾಗಿದ್ದಳು. ಗಂಡ-ಹೆಂಡತಿ ನಡುವೆ ಏನೇ ಇರಬಹುದು. ಆದರೆ ಇಂತಹ ಸಂದರ್ಭದಲ್ಲಿ ಅವನು ನನ್ನವನು ಎಂದು ಕಾಪಾಡಿಕೊಳ್ಳುವುದು ಇದೆಯಲ್ಲಾ ಅದಕ್ಕೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಕೆಲವೊಮ್ಮೆ ನನಗೇ ಅನಿಸುತ್ತೆ, ನಾನು ಗೀತಾಳನ್ನು ಪಡೆಯಲು ಅರ್ಹನಾ ಅಂತ ಎಂದು ಶಿವಣ್ಣ ಕಣ್ಣೀರು ಹಾಕಿದ್ದಾರೆ. ನಾನು ಅವಳಿಗೆ ಸಾರಿ ಹೇಳಬಹುದಷ್ಟೇ, ಸಾರಿ ಎನ್ನುವುದು ಚಿಕ್ಕಪದ ಎಂದು ಭಾವುಕರಾಗಿದ್ದಾರೆ.