ಹೈದರಾಬಾದ್: ಟಾಲಿವುಡ್ ನ ಬೇಡಿಕೆಯ ನಟಿ ಪೂಜಾ ಹೆಗ್ಡೆ ಈಗ ಸಿನಿಮೇತರ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.
ನಟಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಏರ್ ಇಂಡಿಗೋ ವಿಮಾನ ಸಂಸ್ಥೆಯ ಸಿಬ್ಬಂದಿಯೊಬ್ಬರ ಬಗ್ಗೆ ದೂರಿದ್ದಾರೆ. ಮುಂಬೈಯಿಂದ ಹೊರಟ ಏರ್ ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ವಿಪುಲ್ ನಕಾಶೆ ಎಂಬಾತ ತಮ್ಮ ಜೊತೆಗೆ ತೀರಾ ದರ್ಪದಿಂದ ವರ್ತಿಸಿದ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.
ನಾನು ಯಾವತ್ತೂ ಇಂತಹ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುವುದಿಲ್ಲ. ಆದರೆ ಈತ ವಿನಾಕಾರಣ ನಮ್ಮ ಜೊತೆ ದರ್ಪದಿಂದ, ತಿರಸ್ಕಾರದಿಂದ ಮತ್ತು ಬೆದರಿಕೆ ಹಾಕುವ ರೀತಿ ವರ್ತನೆ ಮಾಡಿದ್ದಾನೆ. ಇದು ತೀರಾ ಅತಿ ಎನಿಸಿದ ಕಾರಣಕ್ಕೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳಲೇಬೇಕಾಗಿದೆ ಎಂದು ಪೂಜಾ ಟ್ವೀಟ್ ಮಾಡಿದ್ದರು. ತಕ್ಷಣವೇ ಇದಕ್ಕೆ ಸ್ಪಂದಿಸಿರುವ ಏರ್ ಇಂಡಿಗೋ ಸಂಸ್ಥೆ ನಿಮಗೆ ಆದ ಅನಾನುಕೂಲಕ್ಕೆ ಕ್ಷಮೆ ಯಾಚಿಸುತ್ತೇವೆ. ನಿಮ್ಮ ಪ್ರಯಾಣದ ಮಾಹಿತಿ ನೀಡಿದರೆ ತಕ್ಕ ಕ್ರಮ ಕೈಗೊಳ್ಳುತ್ತೇವೆ ಎಂದಿದೆ.