ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮಗಳು ಖುಷಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಸಂದೇಶ ಬರೆದಿದ್ದು ನನ್ನ ಅಮ್ಮನ ಬಗ್ಗೆ ಹೀಗೆಲ್ಲಾ ಹೇಳಿದರೆ ನನಗೆ ಬೇಜಾರಾಗಬಹುದು ಎಂದು ನಿಮಗೆ ಗೊತ್ತಾಗಲ್ವಾ ಎಂದು ಪ್ರಶ್ನೆ ಮಾಡಿದ್ದಾಳೆ.
ಪವಿತ್ರಾ ಗೌಡ ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಹಾಗಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಸಾಕಷ್ಟು ಕೆಟ್ಟ ಕಾಮೆಂಟ್ ಗಳು ಬರುತ್ತಿರುತ್ತದೆ. ಈ ಬಗ್ಗೆ ಖುಷಿ ಗೌಡ ಬೇಸರ ಹೊರ ಹಾಕಿದ್ದಾಳೆ. ಯಾರು ಏನೇ ಅಂದರೂ ನನ್ನ ಅಮ್ಮ ನನಗೆ ಹೀರೋ ಎಂದು ಖುಷಿ ಬರೆದುಕೊಂಡಿದ್ದಾಳೆ.
ನನ್ನ ಅಮ್ಮನ ಬಗ್ಗೆ ನೀವು ಮಾಡುವ ಒಂದೊಂದು ಕೆಟ್ಟ ಕಾಮೆಂಟ್ ಗಳೂ ನನ್ನ ಹೃದಯಕ್ಕೆ ಘಾಸಿ ಮಾಡಿದೆ. ಅವಳ ಹೋರಾಟ, ನೋವು, ಕಠಿಣ ಪರಿಶ್ರಮ ಯಾವುದರ ಅರಿವೂ ನಿಮಗಿಲ್ಲ. ಆಕೆ ಮೌನವಾಗಿಯೇ ಜೀವನದಲ್ಲಿ ಎಷ್ಟು ಹೋರಾಟ ನಡೆಸಿದ್ದಾಳೆ ಎನ್ನುವುದು ನನಗೆ ಮಾತ್ರ ಗೊತ್ತು. ನನ್ನ ಅಮ್ಮ ನನ್ನ ಪ್ರಪಂಚ, ಶಕ್ತಿ. ಆಕೆ ಕೇವಲ ನನ್ನ ತಾಯಿಯಲ್ಲ, ತಂದೆ ಕೂಡಾ. ನನ್ನ ಪಾಲಿಗೆ ಆಕೆ ಪ್ರೀತಿ ಮತ್ತು ತ್ಯಾಗದ ಪ್ರತೀಕ. ನಾನು ಹೇಳುವುದಕ್ಕಿಂತಲೂ ಹೆಚ್ಚು ಆಕೆ ನನಗಾಗಿ ಮಾಡಿದ್ದಾಳೆ. ಆಕೆಯ ಬಗ್ಗೆ ಏನೂ ಗೊತ್ತಿಲ್ಲದೇ ನೀವು ಕಟುವಾದ ಕಾಮೆಂಟ್ ಮಾಡುತ್ತಲೇ ಇದ್ದೀರಿ. ನಿಮಗೆ ಗೊತ್ತಾ? ನಾನು ಇನ್ನೂ ಟೀನೇಜ್ ಹುಡುಗಿ. ನನ್ನ ಅಮ್ಮನ ಬಗ್ಗೆ ಇಂತಹ ಕಾಮೆಂಟ್ ಮಾಡುವಾಗ ನನ್ನ ಮನಸ್ಸಿಗೆ ಎಷ್ಟು ನೋವಾಗಬಹುದು ಎಂದು ನಿಮಗೆ ಗೊತ್ತಾ? ಆಕೆ ತನಗೆ ತೊಂದರೆಯಾದರೂ ತೊಂದರೆಯಿಲ್ಲ, ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎನ್ನುವ ಕೆಲಸ ಮಾಡುವವಳು. ಹಾಗಿದ್ದರೂ ಆಕೆಯ ಹೆಸರನ್ನು ಕೆಲವರು ಕೆಟ್ಟದಾಗಿ ಬಳಸಿಕೊಂಡು, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವುದನ್ನು ನೋಡುತ್ತಿದ್ದೇನೆ. ನಾನು ನೋಡಿರುವ ಬೆಸ್ಟ್ ವ್ಯಕ್ತಿ ನನ್ನ ಅಮ್ಮ. ಮಾತನಾಡುವ ಮೊದಲು ಯೋಚನೆ ಮಾಡಿ. ನಿಮ್ಮ ಮಾತುಗಳು ಎಷ್ಟು ನೋವುಂಟು ಮಾಡಬಹುದು ಎಂದು ಯೋಚಿಸಿ ಎಂದು ಖುಷಿ ಗೌಡ ಬೇಸರ ಹೊರಹಾಕಿದ್ದಾಳೆ.