ಬೆಂಗಳೂರು: ರಿಷಬ್ ಶೆಟ್ಟಿ ಹೇಳಿದರು ಎಂಬ ಒಂದೇ ಕಾರಣಕ್ಕೆ ಕಾಂತಾರ ಚಾಪ್ಟರ್ 1 ರಲ್ಲಿ ಅವರ ಸ್ನೇಹಿತನ ಪಾತ್ರ ಮಾಡಿದ್ದ ಮಲಯಾಳಿ ನಟ ಅವಿನಾಶ್ ಬೀಚ್ ನಲ್ಲಿ ಸುಡು ಮಧ್ಯಾಹ್ನ ನಿಂತು ಬರುತ್ತಿದ್ದರಂತೆ!
ಮಲಯಾಳಿ ಮೂಲದ ನಟ ಅವಿನಾಶ್ ಕಾಂತಾರದಲ್ಲಿ ರಿಷಬ್ ಶೆಟ್ಟಿ ಸ್ನೇಹಿತರ ಗ್ಯಾಂಗ್ ನಲ್ಲಿದ್ದ ಒಬ್ಬರಾಗಿದ್ದರು. ಕಾಡು ಮನುಷ್ಯರ ಪಾತ್ರವಾಗಿರುವುದರಿಂದ ಮೈ ಬಣ್ಣ ಕೊಂಚ ಕಪ್ಪಗಾಗಬೇಕಿತ್ತು. ಇದಕ್ಕಾಗಿ ರಿಷಬ್ ಶೆಟ್ಟಿ ಸ್ವಲ್ಪ ಕಪ್ಪಗಾಗಬೇಕು ಎಂದಿದ್ದರಂತೆ. ಅದಕ್ಕೆ ಅವರು ಮಾಡಿದ ಕೆಲಸವೇನೆಂದು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.
ವರ್ಕ್ ಶಾಪ್ ನಲ್ಲಿ ನಾಲ್ಕನೇ ರೌಂಡ್ ಗೆ ಬಂದಾಗ ನನಗೆ ರಿಷಬ್ ಸರ್ ಗ್ಯಾಂಗ್ ನಲ್ಲಿರುವ ಒಂದು ಪಾತ್ರ ಎಂದು ಗೊತ್ತಾಗಿದ್ದು. ವರ್ಕ್ ಶಾಪ್ ನಲ್ಲಿದ್ದಾಗ ಒಂದು ದಿನ ಬಾಗಿಲ ಬಳಿ ಓ.. ಎಂದು ದೊಡ್ಡ ಶಬ್ಧ. ನೋಡಿದರೆ ರಿಷಬ್ ಸರ್.
ಆವತ್ತೇ ನಾನು ಅವರನ್ನು ನೋಡಿದ್ದು. ಆ ಶಬ್ಧದೊಂದಿಗೆ ಬಿಳಿ ಟಿಶರ್ಟ್ ಹಾಕಿಕೊಂಡು ರಾಜ ಗಾಂಭೀರ್ಯದಿಂದ ನಮ್ಮ ಬಳಿ ಬಂದರು. ದೊಡ್ಡ ದಾಡಿ, ದೇಹ ಅವರನ್ನು ನೋಡಿ ನಾನು ಒಂದು ಕ್ಷಣ ಅವಾಕ್ಕಾದೆ. ಆ ಗುಂಪಿನಲ್ಲಿ ಸ್ವಲ್ಪ ಕಲರ್ ಇದ್ದವನು ನಾನು. ಹೀಗಾಗಿ ನನ್ನ ನೋಡಿ ತುಂಬಾ ಕಲರ್ ಆಯ್ತು, ಸ್ವಲ್ಪ ಕಪ್ಪಾಗಬೇಕು ಕನ್ನಡದಲ್ಲಿ ಹೇಳಿದರು. ನನಗೆ ಕನ್ನಡ ಬರುತ್ತಿರಲಿಲ್ಲ. ಹೀಗಾಗಿ ಗೊತ್ತಾಗ್ಲಿಲ್ಲ ಸಾರ್ ಎಂದೆ.
ಆಗ ಅವರು ಓ ಮಲಯಾಳಿಯಾ ಎಂದು ಕೇಳಿದರು. ನಂತರ ಕನ್ನಡ ಕಲಿಯಿರಿ ಆಯ್ತಾ ಎಂದರು. ಸ್ವಲ್ಪ ಬೀಚ್ ಗೆಲ್ಲಾ ಹೋಗಿ ದೇಹ ಕಪ್ಪಾಗಿಸಿಕೊಂಡು ಬಾ ಎಂದರು. ಅವರು ನಟ ಮಾತ್ರವಲ್ಲ, ನಿರ್ದೇಶಕರು ಕೂಡಾ ಅಲ್ವಾ. ಅವರ ಮಾತನ್ನು ನಾನು ಗಂಭೀರವಾಗಿ ತೆಗೆದುಕೊಂಡೆ.
ಹೀಗಾಗಿ ನಾನು ಮತ್ತೆ ಊರಿಗೆ ಬಂದು ಪಯ್ಯಾಂಬರ ಬೀಚ್ ನಲ್ಲಿ ನಡು ಮಧ್ಯಾಹ್ನ ಮೂರು ದಿನ ನಿಂತಿದ್ದೆ. ಕೊನೆಗೆ ನಾಲ್ಕನೇ ದಿನ ಲುಕ್ ಟೆಸ್ಟ್ ಗೆ ಕರೆದಿದ್ದರು. ಆಗ ನಾನು ಸ್ವಲ್ಪ ಕಪ್ಪಾಗಿದ್ದೆ. ನಂತರ ಕಪ್ಪು ಮಸಿ ಬಳಿದು ನನ್ನ ಕಲರ್ ಅವರೇ ಮೇಕಪ್ ನಲ್ಲಿ ಚೇಂಜ್ ಮಾಡಿದರು.