ಹೈದರಾಬಾದ್: ಒಂದು ಸಿನಿಮಾಗೆ ಎಷ್ಟೇ ಪ್ರಚಾರ ನೀಡಿದರೂ, ಮೊದಲ ದಿನವೇ ಚಿತ್ರದ ಬಗ್ಗೆ ಜನ ಏನು ಮಾತನಾಡಿಕೊಳ್ಳುತ್ತಾರೆ ಎಂಬುದು ಆ ಚಿತ್ರದ ಸೋಲು-ಗೆಲುವಿಗೆ ಕಾರಣವಾಗುತ್ತದೆ.
ಇದು ವಿಕ್ರಾಂತ್ ರೋಣ ಮತ್ತು ಲೈಗರ್ ಸಿನಿಮಾ ವಿಚಾರದಲ್ಲಿ ಸತ್ಯವಾಗಿದೆ. ಈ ಎರಡೂ ಸಿನಿಮಾಗಳಿಗೆ ಬಿಡುಗಡೆಗೆ ಮೊದಲು ಭಾರೀ ಹೈಪ್ ಇತ್ತು. ಎರಡೂ ಸಿನಿಮಾಗಳೂ ಕೆಜಿಎಫ್ ಸಿನಿಮಾವನ್ನು ಮೀರಿಸಬಹುದು ಎಂಬ ಲೆಕ್ಕಾಚಾರಗಳಿತ್ತು. ಆದರೆ ಅದಕ್ಕೆ ತಕ್ಕ ಗಳಿಕೆ ಮಾಡಲಿಲ್ಲ.
ಕಾರಣ ಎರಡೂ ಸಿನಿಮಾಗಳಿಗೆ ಬಿಡುಗಡೆಯಾದ ದಿನವೇ ನೆಗೆಟಿವ್ ರಿವ್ಯೂ ಬಂದಿದ್ದು. ಅಪಪ್ರಚಾರದ ನಡುವೆಯೂ ಸುದೀಪ್ ಅಭಿನಯದ ವಿಕ್ರಾಂತ್ ರೋಣ 100 ಕೋಟಿ ಗಳಿಕೆ ಮಾಡಿತು. ಲೈಗರ್ ಕೂಡಾ ಅದೇ ಹಾದಿಯಲ್ಲಿದೆ. ಮೊದಲ ದಿನವೇ ಸಿನಿಮಾ ನೋಡಿದ ಕೆಲವರು ಸಿನಿಮಾ ನಿರೀಕ್ಷಿಸಿದಷ್ಟು ಚೆನ್ನಾಗಿಲ್ಲ ಎಂದು ಹೇಳಿದ್ದರಿಂದ ಗಳಿಕೆಗೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ಎಷ್ಟೇ ಪ್ರಚಾರ ನೀಡಿದರೂ ಜನ ಸಿನಿಮಾ ನೋಡಿ ಏನು ಅಭಿಪ್ರಾಯ ಕೊಡುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂಬುದನ್ನು ಈ ಎರಡೂ ಸಿನಿಮಾಗಳು ಸಾಬೀತುಪಡಿಸಿವೆ.