Publish Date: Tue, 04 Feb 2020 (09:29 IST)
Updated Date: Tue, 04 Feb 2020 (09:32 IST)
ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ಸಂಭ್ರಮದಲ್ಲಿದ್ದಾರೆ. ಫೆಬ್ರವರಿ 10 ಕ್ಕೆ ಉದ್ಯಮಿ ಮಂಜುನಾಥ್ ಪುತ್ರಿ ರೇವತಿ ಜತೆ ನಿಖಿಲ್ ನಿಶ್ಚಿತಾರ್ಥ ನಡೆಯಲಿದೆ.
ಆದರೆ ಮದುವೆ ಮಾತ್ರ ಬೆಂಗಳೂರಿನಲ್ಲಿ ನಡೆಯಲ್ಲ ಎಂದಿರುವ ಕುಮಾರಸ್ವಾಮಿ ಇದಕ್ಕೆ ಕಾರಣವನ್ನೂ ಹೇಳಿದ್ದಾರೆ. ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎನ್ನಲಾಗಿದೆ.
ಆದರೆ ಮದುವೆ ಸಮಾರಂಭವನ್ನು ತಮಗೆ ರಾಜಕೀಯ ಮರುಜನ್ಮ ನೀಡಿದ ರಾಮನಗರ-ಚನ್ನಪಟ್ಟಣ ನಡುವೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಕುಟುಂಬದಲ್ಲಿ ನಡೆಯುವ ಏಕೈಕ ಶುಭ ಸಮಾರಂಭವಿದು. ಈ ಮೂಲಕ ನನ್ನ ಜನರಿಗೆ ಊಟ ಹಾಕಿಸಲು ನನಗೆ ಒಂದು ಅವಕಾಶ. ಹೀಗಾಗಿ ಇಲ್ಲಿಯೇ ಮದುವೆ ಇಟ್ಟುಕೊಳ್ಳುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.