ಹೈದರಾಬಾದ್: ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಕನ್ನಡತಿ ರಶ್ಮಿಕಾ ಮಂದಾನ ಅಭಿನಯದ ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಹೈದರಾಬಾದ್ನ ಆರ್ಟಿಸಿ ಕ್ರಾಸ್ರೋಡ್ಸ್ನ ಸಂಧ್ಯಾ ಥಿಯೇಟರ್ನಲ್ಲಿ ಈ ದುರಂತ ಸಂಭವಿಸಿದೆ. ದಿಲ್ಸುಖ್ನಗರದ ರೇವತಿ ಮೃತ ಮಹಿಳೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.
ರಾತ್ರಿ 10:30 ರ ಸುಮಾರಿಗೆ ಥಿಯೇಟರ್ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸಿನಿಮಾ ಸ್ಕ್ರೀನಿಂಗ್ನಲ್ಲಿ ಸಂಗೀತ ನಿರ್ದೇಶಕ ದೇವಿ ಪ್ರಸಾದ್ ಅವರೊಂದಿಗೆ ಅಲ್ಲು ಅರ್ಜುನ್ ಹಾಜರಿದ್ದರು. ಈ ವೇಳೆ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು.
ನೂಕು ನುಗ್ಗಲಿನಿಂದ ಥಿಯೇಟರ್ ನ ಮುಖ್ಯ ಗೇಟ್ ಕುಸಿದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಠಿ ಪ್ರಹಾರ ನಡೆಸಿದ್ದು, ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಮಹಿಳೆ ಮೃತಪಟ್ಟಿದ್ದು, ಅವರ 9 ವರ್ಷದ ಮಗ ಗಂಭೀರ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಚಿತ್ರ ವೀಕ್ಷಿಸಲು ಮಾತ್ರವಲ್ಲದೆ ಚಿತ್ರದ ನಿರ್ಮಾಣ ತಂಡದ ಸದಸ್ಯರನ್ನು ನೋಡಲು ಸಹ ಸಾವಿರಾರು ಜನರು ಥಿಯೇಟರ್ ನಲ್ಲಿ ಜಮಾಯಿಸಿದ್ದರು. ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚಿನ ಪೊಲೀಸರನ್ನು ಕರೆಸಲಾಗಿದೆ.