ಕೊಚ್ಚಿ: ಇತ್ತೀಚೆಗಷ್ಟೇ ಬಿಡುಗಡೆಯಾದ ಮಲಯಾಳಂನ ಎಂಪುರಾನ್ ಸಿನಿಮಾದಲ್ಲಿ ಹಿಂದೂಗಳು ಮತ್ತು ಬಲಪಂಥೀಯರಿಗೆ ನೋವಾಗುವ ಅಂಶಗಳಿವೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಇದೀಗ ಕೊನೆಗೂ ಸಿನಿಮಾದ ದೃಶ್ಯಗಳಿಗೆ ಸಂಬಂಧಪಟ್ಟಂತೆ ನಾಯಕ ನಟ ಮೋಹನ್ ಲಾಲ್ ಕ್ಷಮೆ ಯಾಚಿಸಿದ್ದಾರೆ.
ಪೃಥ್ವಿರಾಜ್ ಸುಕುಮಾರ್ ನಿರ್ದೇಶನದ ಎಂಪುರಾನ್ ಸಿನಿಮಾದಲ್ಲಿ ರಾಜಕೀಯ ವಿಚಾರಗಳನ್ನು ತೋರಿಸುವಾಗ ಹಿಂದೂಗಳನ್ನು ವಿಲನ್ ಮತ್ತು ಮುಸ್ಲಿಮರನ್ನು ಸಂತ್ರಸ್ತರಾಗಿ ತೋರಿಸಲಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ. ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಸ್ವತಃ ಮೋಹನ್ ಲಾಲ್ ಕಟ್ಟಾ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಮೋಹನ್ ಲಾಲ್ ಕ್ಷಮೆ ಯಾಚಿಸಿದ್ದು, ನನ್ನ ಸಿನಿಮಾದಲ್ಲಿ ಯಾವುದೇ ಒಂದು ಸಮುದಾಯ ಅಥವಾ ರಾಜಕೀಯ, ಸಿದ್ಧಾಂತಗಳಿಗೆ ನೋವಾಗುವ ರೀತಿ ದೃಶ್ಯಗಳಿರದಂತೆ ನೋಡಿಕೊಳ್ಳುವುದು ನನ್ನ ಜವಾಬ್ಧಾರಿಯಾಗಿದೆ. ಆದರೆ ಎಂಪುರಾನ್ ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳು ನನ್ನನ್ನು ಇಷ್ಟಪಡುವ ಕೆಲವರಿಗೆ ನೋವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ನಾವು ಈ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ಮೋಹನ್ ಲಾಲ್ ಹೇಳಿಕೆ ಬೆನ್ನಲ್ಲೇ ಚಿತ್ರತಂಡ ಕೆಲವೊಂದು ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಿದ್ದು ಇಂದಿನಿಂದ ಹೊಸ ವರ್ಷನ್ ಎಂಪುರಾನ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.