Publish Date: Fri, 16 Feb 2024 (10:11 IST)
Updated Date: Fri, 16 Feb 2024 (10:21 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬ ನಿಮಿತ್ತ ಅವರಿಗೆ ವಿಶ್ ಮಾಡಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ.
ಮಧ‍್ಯರಾತ್ರಿಯಿಂದಲೇ ಅವರ ಮುಂದೆ ಜನಸಾಗರವೇ ಸೇರಿದೆ. ಈ ಮೊದಲೇ ದರ್ಶನ್ ತಮ್ಮ ಮನೆ ಮುಂದೆ ಬರುವ ಅಭಿಮಾನಿಗಳು ಇತರೆ ನಿವಾಸಿಗಳಿಗೆ ತೊಂದರೆ ಕೊಡಬಾರದು ಎಂದು ಮನವಿ ಮಾಡಿದ್ದರು. ಹಾಗಿದ್ದರೂ ಸಾಕಷ್ಟು ಜನ ದರ್ಶನ್ ರನ್ನು ನೋಡಲೇಬೇಕೆಂದು ಕಾದು ಕುಳಿತಿದ್ದರು.
ಇಂದು ಬೆಳಿಗ್ಗೆಯೂ ಜನ ಜಂಗುಳಿ ಮುಂದುವರಿದಿದೆ. ದರ್ಶನ್ ಅವರ ಫೋಟೋ ಇರುವ ಪ್ಲೇಕಾರ್ಡ್ ಗಳನ್ನು ಹಿಡಿದು ಜೈಕಾರ ಕೂಗುತ್ತಾ ಅಭಿಮಾನಿಗಳು ಸಂಬ್ರಮಿಸುತ್ತಿದ್ದಾರೆ. ದೂರದ ಊರುಗಳಿಂದ ಬಂದ ಅಭಿಮಾನಿಗಳು ಅವರು ನಮ್ಮ ಪ್ರತಿಯೊಬ್ಬರನ್ನೂ ಮಾತನಾಡಿಸದಿದ್ದರೂ ಬೇಡ, ಒಮ್ಮೆ ದರ್ಶನ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ.
ದರ್ಶನ್ ಮನೆ ಸುತ್ತಮುತ್ತ ದೊಡ್ಡ ಕಟೌಟ್ ಹಾಕಿ ಶುಭ ಕೋರಲಾಗಿದೆ. ನಿನ್ನೆ ಮಧ‍್ಯರಾತ್ರಿಯೇ ಕಾಟೇರ ನಿರ್ದೇಶಕ ತರುಣ್ ಸುಧೀರ್ ದರ್ಶನ್ ನಿವಾಸಕ್ಕೆ ಬಂದು ಶುಭ ಕೋರಿದ್ದಾರೆ. ಜೊತೆಗೆ ಅವರ ಹೊಸ ಸಿನಿಮಾಗಳೂ ಘೋಷಣೆಯಾಗಿರುವುದರಿಂದ ಈ ಬಾರಿ ದರ್ಶನ್ ಹುಟ್ಟುಹಬ್ಬ ಅವರ ಅಭಿಮಾನಿಗಳ ಪಾಲಿಗೆ ವಿಶೇಷವಾಗಿದೆ.