ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯ್ಯದ್ ಅವರು ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರ ಕೈಹಿಡಿದರು.
ನಗರದ ಖಾಸಗಿ ರೆಸಾರ್ಟ್‌ನಲ್ಲಿ ಗುರು ಹಿರಿಯರ ಹಾಗೂ ಆಪ್ತರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾದರು.
ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದರೂ ಕುಟುಂಬದವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜೀ ಕನ್ನಡದ ಸರಿಗಮಪ ಶೋನಲ್ಲಿ ಹಿಜಬ್ ಧರಿಸಿ ಹಿಂದೂ ಭಜನೆ ಹಾಡಿದ್ದಕ್ಕೆ ಸುಹಾನಾ ನಡೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೀಗ ಎಲ್ಲಾ ಅಡೆತಡೆಗಳನ್ನ ದಾಟಿ ತಾವು ಬಹುವರ್ಷಗಳಿಂದ ಪ್ರೀತಿಸುತ್ತಿರುವ ಅಂತರ್ ಧರ್ಮದ ಹುಡುಗನ ಜೊತೆ ಮದುವೆಯಾಗಿದ್ದಾರೆ.
ಸುಹಾನಾ ಸೈಯ್ಯದ್ ಹಾಗೂ ನಿತಿನ್ ಶಿವಾಂಶ್ ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗಿನಿಂದಲೂ ಪರಿಚಯದವರು. ನಿತಿನ್ ರಂಗಭೂಮಿ ಕಲಾವಿದರಾಗಿದ್ದು, ಸುಹಾನಾ ಸೈಯ್ಯದ್‌ಗೂ ರಂಗಭೂಮಿ ಮೇಲೆ ಆಸಕ್ತಿಯಿತ್ತು. ಇಲ್ಲಿ ಇವರಿಬ್ಬರ ಸ್ನೇಹ ಮತ್ತಷ್ಟು ಗಾಢವಾಗಿ, ಪ್ರೀತಿಗೆ ತಿರುಗಿತು.
ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕವೇ ಮದುವೆ ಆಗಬೇಕೆಂದು ಇಬ್ಬರು ನಿರ್ಧರಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.