ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಜಾಮೀನು ಅರ್ಜಿ ಹಣೆಬರಹ ಇಂದು ತಿಳಿದುಬರಲಿದೆ. ಆದರೆ ದರ್ಶನ್ ಗೆ ಈಗ ಅನಾರೋಗ್ಯವೇ ವರವಾಗುವ ಲಕ್ಷಣ ಕಾಣುತ್ತಿದೆ.
ನಟ ದರ್ಶನ್ ಬಳ್ಳಾರಿ ಜೈಲಿಗೆ ಬಂದಾಗಿನಿಂದ ಬೆನ್ನು ನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಜೈಲಿಗೇ ಬಂದಿದ್ದ ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸಿದ್ದು ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದೆ, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಆದರೆ ಸದ್ಯಕ್ಕೆ ದರ್ಶನ್ ಸ್ಕ್ಯಾನಿಂಗ್ ಕೂಡಾ ಮಾಡಿಸಿಕೊಳ್ಳಲು ನಿರಾಕರಿಸಿದ್ದು ಕೇವಲ ನೋವು ನಿವಾರಕ ಗುಳಿಗೆ ಸೇವಿಸುತ್ತಿದ್ದಾರೆ.
ಬೆಂಗಳೂರಿಗೆ ಹೋದ ಮೇಲೆ ನಾನೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವೆ ಎಂದಿದ್ದಾರಂತೆ. ಆದರೆ ಇದೇ ವಿಚಾರ ಅವರ ಜಾಮೀನು ಭವಿಷ್ಯಕ್ಕೆ ವರವಾಗುವ ಸಾಧ್ಯತೆಯಿದೆ. ಅನಾರೋಗ್ಯವಾಗಿದೆ, ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ ಜಾಮೀನು ನೀಡಿ ಎಂದು ವಕೀಲರು
ವಾದ ಮಂಡಿಸಬಹುದು.
ಇದರಿಂದ ನಟ ದರ್ಶನ್ ಇಂದೇ ಅಲ್ಲದಿದ್ದರೂ ಕೆಲವೇ ದಿನಗಳಲ್ಲಿ ಜಾಮೀನು ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಬಂಧನದಲ್ಲಿರುವ ಆರೋಪಿಗಳಿಗೆ ಅನಾರೋಗ್ಯವೇ ಹಲವು ಬಾರಿ ಪ್ಲಸ್ ಪಾಯಿಂಟ್ ಆಗುವುದು ಇದೆ. ಈಗ ದರ್ಶನ್ ವಿಚಾರದಲ್ಲೂ ಅದೇ ಆಗುವ ಸಾಧ್ಯತೆಯಿದೆ.