ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಇಂದು ಎಸ್ ಪಿಪಿ ಪ್ರಸನ್ನಕುಮಾರ್ ತಮ್ಮ ವಾದ ಮಂಡಿಸಲಿದ್ದಾರೆ.
ಇದು ಮೂರನೇ ಬಾರಿಗೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಮುಂದೂಡಿಕೆಯಾಗಿದೆ. ಇದುವರೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ದರ್ಶನ್ ವೈದ್ಯಕೀಯ ವರದಿಗಳನ್ನು ಸಲ್ಲಿಸಿ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಾಗಿದೆ. ಈ ಆಧಾರದಲ್ಲಿ ಜಾಮೀನು ನೀಡಿ ಎಂದು ಮನವಿ ಮಾಡಿದ್ದರು.
ಇದಾದ ಬಳಿಕ ಎಸ್ ಪಿಪಿ ಪ್ರಸನ್ನ ಕುಮಾರ್ ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚಿಸಿತ್ತು. ಆದರೆ ಪ್ರಸನ್ನ ಕುಮಾರ್ ಒಂದು ದಿನದ ಕಾಲಾವಕಾಶ ಕೇಳಿದ್ದರು. ಅದರಂತೆ ದರ್ಶನ್ ಗೆ ಯಾಕೆ ಜಾಮೀನು ನೀಡಬಾರದು ಎಂಬುದಾಗಿ ಎಸ್ ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಲಿದ್ದಾರೆ.
ಹೀಗಾಗಿ ಇಂದೇ ಜಾಮೀನು ತೀರ್ಪು ಪ್ರಕಟವಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಪ್ರಸನ್ನಕುಮಾರ್ ಆಕ್ಷೇಪಣೆ ಸಲ್ಲಿಸದೇ ಇದ್ದಲ್ಲಿ ಮಾತ್ರ ದರ್ಶನ್ ಗೆ ಸುಲಭವಾಗಿ ಜಾಮೀನು ಸಿಗಬಹುದು. ಆದರೆ ಇದೊಂದು ಹೈ ಫ್ರೊಫೈಲ್ ಕೇಸ್ ಆಗಿರುವುದರಿಂದ ಪ್ರಸನ್ನ ಕುಮಾರ್ ಜಾಮೀನು ನೀಡಬಾರದು ಎಂದು ವಾದ ಮಂಡಿಸಲಿದ್ದು, ಅವರ ವಾದ ಕೇಳಿದ ಬಳಿಕ ಹೈಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ.