Publish Date: Tue, 29 Oct 2024 (09:03 IST)
Updated Date: Tue, 29 Oct 2024 (09:06 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಮೂರು ವರ್ಷವಾಗಿದೆ. ಈ ದಿನವನ್ನು ಅಪ್ಪು ಅಭಿಮಾನಿಗಳು ಮಾತ್ರವಲ್ಲ, ಕನ್ನಡಿಗರು ಯಾರೂ ಮರೆಯಲು ಸಾಧ್ಯವೇ ಇಲ್ಲ.
ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಆಘಾತಕಾರೀ ಸಾವುಗಳು ಎರಡು. ಅದರಲ್ಲಿ ಒಂದು ದಿವಂಗತ ಶಂಕರ್ ನಾಗ್ ಅವರದ್ದಾದರೆ ಇನ್ನೊಂದು ಪುನೀತ್ ರಾಜ್ ಕುಮಾರ್ ಅವರದ್ದು. ಖ್ಯಾತಿಯ ಉತ್ತುಂಗದಲ್ಲಿದ್ದಾಗ, ವಯಸ್ಸಲ್ಲದ ವಯಸ್ಸಿನಲ್ಲಿ ಆಘಾತಕಾರೀ ಸಾವನ್ನಪ್ಪಿದ್ದ ಇಬ್ಬರು ಸ್ಟಾರ್ ಗಳಿವರು.
ಅಕ್ಟೋಬರ್ 29, 2021 ರಂದು ಪುನೀತ್ ರಾಜ್ ಕುಮಾರ್ ಹೃದಯಸ್ತಂಬನಕ್ಕೊಳಗಾಗಿ ದಿಡೀರ್ ಆಗಿ ಸಾವನ್ನಪ್ಪಿದ್ದರು. ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಡಲಿಲ್ಲಿ ಮಲಗಿಯೇ ಪುನೀತ್ ಪ್ರಾಣ ಬಿಟ್ಟಿದ್ದರು. ಚಿತ್ರರಂಗದಲ್ಲಿ ಶತ್ರುಗಳೇ ಇಲ್ಲದ, ಎಲ್ಲರಲ್ಲೂ ಸ್ನೇಹವನ್ನೇ ಕಾಣುತ್ತಿದ್ದ ಅಪ್ಪು ಅಗಲುವಿಕೆಯನ್ನು ಅರಗಿಸಿಕೊಳ್ಳಲು ಇಂದಿಗೂ ಕನ್ನಡಿಗರಿಗೆ ಸಾಧ್ಯವಾಗಿಲ್ಲ.
ಅವರು ನಿಧನರಾಗಿ ಇಂದಿಗೆ ಮೂರು ವರ್ಷವಾಗಿದ್ದು, ಅವರ ಸಮಾಧಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಬೆಳಗ್ಗೆಯಿಂದ ಜನ ಸೇರಿದ್ದಾರೆ. ಅಪ್ಪು ಸಮಾಧಿಗೆ ಇಂದು ಡಾ. ರಾಜ್ ಕುಟುಂಬವೂ ಬಂದು ಪೂಜೆ ಸಲ್ಲಿಸಲಿದೆ. ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅವರ ಪುಣ್ಯತಿಥಿಯನ್ನು ಆಚರಿಸುತ್ತಿದ್ದಾರೆ. ಅವರ ನಿಧನದ ಬಳಿಕ ಕನ್ನಡ ಚಿತ್ರರಂಗಕ್ಕೆ ಆವರಿಸಿದ ಶೂನ್ಯವನ್ನು ಇಂದಿಗೂ ತುಂಬಲು ಸಾಧ್ಯವಾಗಿಲ್ಲ.