Publish Date: Thu, 06 Jun 2019 (12:36 IST)
Updated Date: Thu, 06 Jun 2019 (12:45 IST)
ಗೋವಿಂದಾಯ ನಮಃ ಚಿತ್ರದ ಪ್ಯಾರ್ ಗೆ ಆಗ್ಬಿಟೈತೆ ಹಾಡಿನ ಮೂಲಕವೇ ಕನ್ನಡಿಗರ ಮನಸುಗಳಿಗೆ ಲಗ್ಗೆಯಿಟ್ಟಿದ್ದವರು ನಟಿ ಪಾರೂಲ್ ಯಾದವ್ ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಾ ಕನ್ನಡದ ಹುಡುಗಿಯಾಗಿಯೇ ನೆಲೆ ಕಂಡುಕೊಂಡಿರೋ ಪಾರುಲ್ ಈಗ ಬಟರ್ಫ್ಲೈ ಆಗಿ ಹಾರಿ ಬರಲು ತಯಾರಾಗಿದ್ದಾರೆ. ಹೀಗೆ ಸಾಗಿ ಬಂದಿರೋ ಪಾರುಲ್ ಪಾಲಿಗಿಂದು ಹುಟ್ಟು ಹಬ್ಬದ ಸಡಗರ...
ಮೂಲತಃ ಉತ್ತರ ಭಾರತದ ಹುಡುಗಿಯಾದರೂ ಪಾರುಲ್ ನಟಿಯಾಗಿ ನೆಲೆ ಕಂಡುಕೊಂಡಿರೋದು ಕನ್ನಡದಲ್ಲಿಯೇ. ಈ ಈ ಕಾರಣದಿಂದಲೇ ಕನ್ನಡಿಗರ ಬಗ್ಗೆ ಭಾರೀ ಒಲವು ಮತ್ತು ಕನ್ನಡತನದ ಬಗ್ಗೆ ಪ್ರೀತಿ ಹೊಂದಿರುವವರು ಪಾರೂಲ್. ಅವರಿಗೆ ಈ ಹುಟ್ಟುಹಬ್ಬ ಇದುವರೆಗಿನದಕ್ಕಿಂತಾ ವಿಶೇಷ. ಯಾಕೆಂದರೆ ಅವರೇ ನಿರ್ಮಾಪಕಿಯಾಗಿ, ಮುಖ್ಯಪಾತ್ರವನ್ನೂ ನಿರ್ವಹಿಸಿರುವ ಬಟರ್ಫ್ಲೈ ಚಿತ್ರವೀಗ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಿರೀಕ್ಷೆ ಹುಟ್ಟು ಹಾಕಿರೋ ಈ ಚಿತ್ರದ ಬಗ್ಗೆ ಎಲ್ಲೆಡೆ ಸಕಾರಾತ್ಮಕ ಅಭಿಪ್ರಾಯಗಳೇ ಇವೆ. ಇದುವೇ ಪಾರುಲ್ ಪಾಲಿಗೆ ಈ ಹುಟ್ಟಹಬ್ಬವನ್ನು ವಿಶೇಷವಾಗಿಸಿದೆ.
ಪಾರುಲ್ ಉತ್ತರ ಭಾರತದಿಂದ ಬಂದಿರೋ ನಟಿ. ಆದರೆ ಅವರೀಗ ಅಪ್ಪಟ ಕನ್ನಡದ ಹುಡುಗಿಯೇ ಆಗಿ ಹೋಗಿದ್ದಾರೆ. ಕನ್ನಡ ಕಲಿಯಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಾ, ಸಮಾರಂಭಗಳಲ್ಲಿ ಕನ್ನಡದಲ್ಲಿಯೇ ಮಾತಾಡಲು ಪ್ರಯತ್ನಿಸುತ್ತಾ ತಮಗೆ ಬದುಕು ನೀಡಿದ ಕನ್ನಡತನವನ್ನು ಪಾರುಲ್ ಆರಾಧಿಸುತ್ತಿದ್ದಾರೆ.
ಪಾರೂಲ್ ಇದೀಗ ನಟಿಸಿರೋ ಬಟರ್ ಫ್ಲೈ ಚಿತ್ರ ಹಿಂದಿಯಲ್ಲಿ ಭಾರೀ ಯಶ ಕಂಡಿದ್ದ ಕ್ವೀನ್ ಚಿತ್ರದ ರೀಮೇಕ್. ಆದರೆ ಅದೊಂದು ರೀಮೇಕ್ ಎಂಬ ಫೀಲೇ ಕಾಡದಂತೆ ಕಥೆಯನ್ನು ನೇಟಿವಿಟಿಗೆ ಒಗ್ಗಿಸಿಕೊಂಡು ರೂಪಿಸಲಾಗಿದೆಯಂತೆ.
ಇದರಲ್ಲಿ ಪಾರೂಲ್ ಪಾರ್ವತಿ ಎಂಬ ಗೋಕರ್ಣದ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಎಲ್ಲ ಹುಡುಗಿಯರ ಮನೋ ಭೂಮಿಕೆಗೂ ಕನೆಕ್ಟ್ ಆಗುವಂಥಾ ಪಾತ್ರ. ಇದುವೇ ತನ್ನ ವೃತ್ತಿ ಜೀವನಕ್ಕೆ ಮತ್ತಷ್ಟು ಓಘ ಕೊಡುತ್ತದೆ ಅನ್ನೋ ನಿರೀಕ್ಷೆ ಪಾರೂಲ್ ಅವರದ್ದು.