Publish Date: Wed, 01 May 2019 (19:10 IST)
Updated Date: Wed, 01 May 2019 (19:17 IST)
ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 88ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಕೃಷ್ಣಾ ಅವರ ಜನುಮ ದಿನದ ಪ್ರಯುಕ್ತ ಕೃಷ್ಣಾ ಅವರನ್ನು ಬಿಜೆಪಿ ನಾಯಕರು ಹಾಗೂ ಕೆಲ ಕಾಂಗ್ರೆಸ್ ಮುಖಂಡರು ಭೇಟಿಯಾಗಿ ಶುಭಕೋರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕೃಷ್ಣಾ ಅವರ 88 ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಅವರು 100 ವರ್ಷ ಬಾಳಿ ಬದುಕಿ ನಮಗೆಲ್ಲ ಹರಸಬೇಕು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೃಷ್ಣಾ ಅವರು ರಾಜ್ಯದ 22 ಜಿಲ್ಲೆಗಳಲ್ಲಿ ಸುತ್ತಾಡಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ನಮಗೆಲ್ಲ ಬಲ ತಂದಿದ್ದಾರೆ ಎಂದರು.
ಎಸ್.ಎಂ.ಕೃಷ್ಣಾ ಮಾತನಾಡಿ, ಪಕ್ಷದ ನಾಯಕರು ತಮ್ಮ ಹುಟ್ಟುಹಬ್ಬವನ್ನು ಇಷ್ಟೊಂದು ಸಂಭ್ರಮವಾಗಿ ಆಚರಿಸುತ್ತಾರೆ ಎಂದು ತಾವು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರು ಆಶೀರ್ವಾದ ಮಾಡುವ ಬಗ್ಗೆ ನಿರೀಕ್ಷೆ ಮಾಡಿರಲಿಲ್ಲ. ಸಾಮಾನ್ಯವಾಗಿ ಜನ್ಮದಿನದ ದಿನ ಬೆಂಗಳೂರಿನಲ್ಲಿ ಇರುತ್ತಿರಲ್ಲ. ಈ ಬಾರಿ ಇದ್ದೇನೆ.
ಜನ್ಮದಿನ ಬಹಿರಂಗವಾಗಿ ಆಚರಿಸಿದ್ದು ಎಲ್ಲರ ಆಶೀರ್ವಾದದಿಂದ ಸಾರ್ವಜನಿಕ ಜೀವನದಲ್ಲಿ ಕೆಲ ಕಾಲ ಇನ್ನೂ ಉತ್ಸಾಹದಿಂದ ಬಿಜೆಪಿಯಲ್ಲಿ ಕೆಲಸ ಮಾಡುವುದಾಗಿ ಸಂತಸ ವ್ಯಕ್ತಪಡಿಸಿದರು. ಮೇ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಲೋಕಸಭೆ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಆಗಬಹುದಾದ ರಾಜಕೀಯ ಬದಲಾವಣೆಯ ಪ್ರಕ್ರಿಯೆಗಳನ್ನು ತಾವು ಕುತೂಹಲದಿಂದ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು.