ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಹಲವು ನಟ-ನಟಿಯರನ್ನು ಸಿಸಿಬಿ, ಐಎಸ್ ಡಿ, ಎನ್ ಸಿಬಿ ತನಿಖೆ ನಡೆಸುತ್ತಿದೆ. ಆದರೆ ಒಬ್ಬೊಬ್ಬರೇ ನಟ-ನಟಿಯರ ಹೆಸರು ಬಂದೊಡನೆ ಆ ಕಲಾವಿದರ ಎದೆಯಲ್ಲಿ ತಪ್ಪು ಮಾಡದೆಯೂ ಭಯ ಆವರಿಸುವ ಪರಿಸ್ಥಿತಿ ಎದುರಾಗಿದೆ.
ವಿಚಾರಣೆಗೆ ಪೊಲೀಸರು ಕರೆದ ಸುದ್ದಿ ತಿಳಿದ ತಕ್ಷಣ ಮಾಧ‍್ಯಮಗಳಲ್ಲಿ ಅವರ ಬಗ್ಗೆ ದೊಡ್ಡದಾಗಿ ಸುದ್ದಿ ಬಿತ್ತರವಾಗುತ್ತಿದೆ. ಇದರಿಂದಾಗಿ ತಪ್ಪು ಮಾಡಿದ್ದಾರೋ, ಬಿಟ್ಟಿದ್ದಾರೋ ಅವರನ್ನು ಎಲ್ಲರೂ ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ. ಇದು ತಮ್ಮ ವೃತ್ತಿ ಜೀವನಕ್ಕೆ, ಭವಿಷ್ಯಕ್ಕೆ ಕುತ್ತು ತರುತ್ತದೆ ಎಂಬ ಭಯ, ಆತಂಕದಲ್ಲಿ ಕಲಾವಿದರಿದ್ದಾರೆ. ಈಗಾಗಲೇ ಸಾಮಾನ್ಯ ವಿಚಾರಣೆಗೊಳಗಾದ ಎಲ್ಲಾ ಕಲಾವಿದರೂ ಮಾಧ್ಯಮಗಳ ಮುಂದೆ ಇದೇ ಮನವಿಯನ್ನು ಮಾಡುತ್ತಿದ್ದಾರೆ. ನಾವು ತಪ್ಪು ಮಾಡಿಲ್ಲ. ವಿಚಾರಣೆಗೆ ಕರೆದಿದ್ದಾರಷ್ಟೇ. ತಪ್ಪು ಮಾಡದೇ ನಮ್ಮನ್ನು ಅಪರಾಧಿಗಳಂತೆ ಬಿಂಬಿಸಿ ವೃತ್ತಿಗೆ ಕಂಟಕ ತರಬೇಡಿ ಎಂದು ಹಲವರು ಮನವಿ ಮಾಡುತ್ತಿದ್ದಾರೆ. ಎಷ್ಟೇ ಒಳ್ಳೆಯ ಕೆಲಸ ಮಾಡಿದ್ದರೂ, ಡ್ರಗ್ ಮಾಫಿಯಾದಲ್ಲೂ ಭಾಗಿಯಾಗದೇ ಇದ್ದರೂ ತಮ್ಮ ಮೇಲೆ ಅನುಮಾನದ ದೃಷ್ಟಿ ಬೀಳುವುದರಿಂದ ತಮ್ಮ ಭವಿಷ್ಯಕ್ಕೇ ಕುತ್ತಾಗುತ್ತದೆ ಎಂಬುದು ಇವರೆಲ್ಲರ ಭಯ.