Publish Date: Sun, 09 Jun 2024 (11:28 IST)
Updated Date: Sun, 09 Jun 2024 (11:39 IST)
ಚೆನ್ನೈ: ಬಹುಭಾಷಾ ನಟ ಅರ್ಜುನ್ ಸರ್ಜಾ ಮಗಳು, ನಟಿ ಐಶ್ವರ್ಯಾ ಸರ್ಜಾ ಮದುವೆ ಸಂಭ್ರಮ ಶುರುವಾಗಿದೆ. ನಿನ್ನೆಯಿಂದ ಸರ್ಜಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿದೆ.
ಐಶ್ವರ್ಯಾ ಸರ್ಜಾ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರೂ ಸಿನಿಮಾಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದಾ ತಮಿಳು ನಟ ಉಮಾಪತಿ ರಾಮಯ್ಯ ಅವರ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಬಳಿಕ ಇದೀಗ ಇಬ್ಬರೂ ಹಿರಿಯರ ಒಪ್ಪಿಗೆ ಪಡೆದುಕೊಂಡು ಮದುವೆಯಾಗುತ್ತಿದ್ದಾರೆ.
ಉಮಾಪತಿ ಅವರು ತಮಿಳು ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ. ಅವರೂ ಕೆಲವು ಸಿನಿಮಾ ಮಾಡಿದ್ದಾರೆ. ಕಳೆದ ವರ್ಷ ಉಮಾಪತಿ ಮತ್ತು ಐಶ್ವರ್ಯಾ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿತ್ತು. ಇದೀಗ ಚೆನ್ನೈನಲ್ಲಿ ನಾಳೆ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ.
ನಿನ್ನೆಯಿಂದ ಚೆನ್ನೈನಲ್ಲಿರುವ ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆ ಕಾರ್ಯಗಳು ಆರಂಭವಾಗಿದೆ. ಅರಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ನೆರವೇರಿದೆ. ಈ ವೇಳೆ ಸರ್ಜಾ ಕುಟುಂಬ ವಧು ಐಶ್ವರ್ಯಾಗೆ ಅರಶಿನ ನೀರಿನ ಸ್ನಾನ ಮಾಡಿಸಿ ಸಂಭ್ರಮಿಸಿದೆ. ಈ ಕ್ಷಣಗಳ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.