Select Your Language

Notifications

webdunia
webdunia
webdunia
webdunia

ಅಣ್ಣಾವ್ರ 35 ವರ್ಷಗಳ ಪದ್ಧತಿ ಮುರಿದಿದ್ದ ಅಂಬರೀಶ್

Rajkumar-Ambareesh
ಅಣ್ಣಾವ್ರು ಮತ್ತು ರೆಬಲ್ ಸ್ಟಾರ್ ಅಂಬರೀಶ್ ನಡುವಿನ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಅಂಬರೀಶ್, ಅಣ್ಣಾವ್ರ 35 ವರ್ಷಗಳ ಪದ್ಧತಿ ಮುರಿದಿದ್ದ ವಿಚಾರವನ್ನು ಸ್ವಾರಸ್ಯಕರವಾಗಿ ಹೇಳಿದ್ದರು. ಆ ಸಂದರ್ಶನದಲ್ಲಿ ಅವರು ಹೇಳಿದ್ದೇನು ಇಲ್ಲಿದೆ ನೋಡಿ ವಿವರ.

ಕೆಆರ್ ಎಸ್ ನಲ್ಲಿ ಶೂಟಿಂಗ್ ಇತ್ತು. ಮಕ್ಕಳೆಲ್ಲಾ ಏನು ಮಾಮ ನಮಗೆಲ್ಲಾ ಊಟ ಕೊಡಿಸಲ್ವಾ ಎಂದ್ರು. ಆಯ್ತು ಮಾಡಿಸ್ತೀನಿ ಎಂದು ನಮ್ಮ ತಾಯಿಗೆ ಹೇಳಿ ಬಾಡೂಟ ಮಾಡಿಸಿದೆ. ನಮ್ಮ ತಾಯಿಗೆ ರಾಜಕುಮಾರ್ ಎಂದರೆ ಬಲೇ ಭಕ್ತಿ. ಹೀಗಾಗಿ ಸುಮಾರು 25-30 ಜನಕ್ಕೆ ಅವರೊಬ್ಬರೇ ನಾಲ್ಕೈದು ಥರಾ ಅಡಿಗೆ ಮಾಡಿದ್ರು.

ಮೈಸೂರು ಮೆಟ್ರೋಪೋಲ್ ಹೋಟೆಲ್ ಅಂತ ಆವತ್ತಿಗೇ ಫೇಮಸ್. ಈಗಲೂ ಇದೆ. ಅಲ್ಲಿನ ವರ್ಕರ್ಸ್ ಎಲ್ಲಾ ನನ್ನ ಫ್ರೆಂಡ್. ಅಲ್ಲಿಗೆ ಒಂದು ಮೈಸೂರು ಮಹರಾಜರು ಕೂರುವ 100 ಜನ ಕೂರಬಹುದಾದ ಒಂದು ಟೇಬಲ್ ರೆಡಿ ಮಾಡಿಸಿದೆ.

ಲಂಚ್ ಗೆ ರೆಡಿಯಾಯ್ತು. ರಾಜಕುಮಾರ್ ಫ್ಯಾಮಿಲಿ, ಮಕ್ಳು, ಕ್ಯಾಮರಾಮೆನ್ ಎಲ್ರೂ ಬಂದ್ರು. ನಾನು ತಗೊಂಡು ಬನ್ನಿ ಎಂದು ಊಟ ತರಿಸಿದೆ. ಅದನ್ನು ನೋಡಿ ರಾಜ್ ಕುಮಾರ್ ಅವರು ‘ಬೇಡಿ ಅಂಬರೀಶ್ ಅವರೇ ಈವತ್ತು ಸೋಮವಾರ. ಈವತ್ತು ನಂಗೆ ಈ ಊಟ ಬೇಡ’ ಅಂದ್ರು. ನಾನು ‘ಏನು ತಿನ್ನಲ್ವಾ? ನಿಮಗೆ ಯಾವಾಗಿಂದ ಗೊತ್ತಾಯ್ತು ಸೋಮವಾರ ಅಂತ? ಏನು ಹುಟ್ಟಿದಾಗಿನಿಂದ ಗೊತ್ತಾ? ನೀವು ತಿನ್ನಲೇಬೇಕು ಎಂದೆ’ ಅದಕ್ಕೆ ಅವರು ‘ಬೇಡ ಅಂಬರೀಶ್ 35 ವರ್ಷದಿಂದ ತಿಂದಿಲ್ಲ’ ಎಂದ್ರು. ಪಕ್ಕದಲ್ಲಿ ಪಾರ್ವತಮ್ಮನವರೂ ಇದ್ರು ‘ಬೇಡ ಬಿಡಪ್ಪಾ.. 35 ವರ್ಷ ಆಗಿದೆ ತಿಂದಿಲ್ಲ’ ಎಂದ್ರು.

ಆಗ ನಾನು ಅಭಿಮಾನದಿಂದ, ಭಕ್ತಿಯಿಂದ ನಮ್ಮ ತಾಯಿ ಮಾಡಿರೋದು. ಇದನ್ನು ಬೇಡ ಎನ್ನೋದು ಸರಿಯಲ್ಲ. ನೀವು ತಿನ್ನಲೇಬೇಕು ಎಂದೆ. ಇಲ್ಲ ಬೇಡ ಅಂಬರೀಶ್ ಆ ಮಕ್ಳಿಗೆ ಹಾಕಿ ತಿಂತವೆ ಎಂದ್ರು. ನಾನು ‘ನೀವು ಈಗ ತಿಂತೀರಾ ಇಲ್ವಾ’ ಕೇಳಿದೆ. ಇಲ್ಲ ಅಂದ್ರು. ಕೊನೆಗೆ ನಾನು ನಮ್ಮ ಹುಡುಗರನ್ನು ಕರೆದು, ಏ ಬಾರೋ ಇಲ್ಲಿ, ಇದೆಲ್ಲಾ ತಗೊಂಡು ಹೋಗಿ ಕಾವೇರಿ ನದಿಗೆ ಬಿಸಾಕು. ಅದೇನು ಪ್ರೊಡಕ್ಷನ್ ಊಟ ಇದ್ಯಲ್ಲಾ ಅದನ್ನು ಈ ಮಕ್ಳಿಗೆಲ್ಲಾ ಬಡಿಸು ಎಂದೆ. ಏನು ಸಾರ್ ನಮ್ಮ ತಾಯಿ ಪ್ರೀತಿಯಿಂದ ಮಾಡಿರೋದು ಸೋಮವಾರ ಬೇಡ ಅಂತೀರಾ, ಬಿಸಾಕಿ ಎಂದೆ.

ಆಗ ರಾಜ್ ಕುಮಾರ್ ಅವರು ‘ಕೊಡಿ ಕೊಡಿ ಸೋಮವಾರವೇನು..’ ಎಂದು ಊಟ ಮಾಡಿಯೇಬಿಟ್ರು ಎಂದು ಅಂಬರೀಶ್ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ದಿನದ ಚಿತ್ರೀಕರಣ ಮಗಿಸಿದ ಪುಟ್ಟಕ್ಕನ ಮಕ್ಕಳು