ಬೆಂಗಳೂರು: ರಾಜ್ ಬಿ ಶೆಟ್ಟಿಯದ್ದು ಆಯ್ತು, ರಿಷಬ್ ಶೆಟ್ಟಿಯದ್ದು ಆಯ್ತು, ಇನ್ನು ನಿಮ್ದು ಯಾವಾಗ ಮಾರಾಯ್ರೇ ಎಂದು ರಕ್ಷಿತ್ ಶೆಟ್ಟಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಒಂದೇ ಸಮ ಕೇಳುತ್ತಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಈಗ ಶೆಟ್ಟರ ಗ್ಯಾಂಗ್ ನದ್ದೇ ಕಾರುಬಾರು. ಶೆಟ್ಟಿ ತ್ರಿವಳಿಗಳಾದ ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಕಳೆದ ನಾಲ್ಕೈದು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದಾರೆ. ಕಡಿಮೆ ಬಜೆಟ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿರುವ ಸಿನಿಮಾಗಳನ್ನು ನೀಡುತ್ತಿದ್ದಾರೆ.
ಅದರಲ್ಲೂ ಈ ಮೂವರ ಸಿನಿಮಾಗಳೆಂದರೆ ಜನ ಮುಗಿಬಿದ್ದು ಥಿಯೇಟರ್ ಗೆ ಹೋಗಿ ನೋಡುತ್ತಾರೆ. ಈ ಪೈಕಿ ಮೂರು ವರ್ಷದಿಂದ ಕಾದು ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಮೂಲಕ ಭರ್ಜರಿ ಹಿಟ್ ಕೊಟ್ಟಿದ್ದಾರೆ. ರಾಜ್ ಬಿ ಶೆಟ್ಟಿ ಸು ಫ್ರಮ್ ಸೋ ಮೂಲಕ 100 ಕೋಟಿ ಬಾಚಿದ್ದಾರೆ.
ಇದೀಗ ರಕ್ಷಿತ್ ಶೆಟ್ಟಿ ಸರದಿ. ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಬಳಿಕ ರಕ್ಷಿತ್ ಎಲ್ಲೋ ಎಂದು ಪ್ರೇಕ್ಷಕರು ಹುಡುಕಾಡುವಂತಾಗಿದೆ. ಎಷ್ಟೋ ದಿನಗಳಿಂದ ಅವರ ಸಿನಿಮಾ ಬಂದಿಲ್ಲ. ಹೀಗಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಆ ಇಬ್ಬರದ್ದು ಶೆಟ್ಟರ ಸಿನಿಮಾ ನೋಡಿ ಆಯ್ತು, ನಿಮ್ಮದು ಯಾವಾಗ ಶೆಟ್ರೇ ಎಂದು ಕೇಳುತ್ತಿದ್ದಾರೆ. ರಕ್ಷಿತ್ ಶೆಟ್ಟಿಯ ಮುಂದಿನ ಸಿನಿಮಾ ರಿಚರ್ಡ್ ಆಂಟನಿ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೆ ಸಿನಿಮಾ ಬಗ್ಗೆ ರಕ್ಷಿತ್ ಅಪ್ ಡೇಟ್ ಕೊಟ್ಟಿಲ್ಲ.