ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ಒಂದು ದಿನ ಕಳೆದಿತ್ತಷ್ಟೇ. ಆಗಲೇ ಚಿತ್ರದ ಪ್ರಮುಖ ದೃಶ್ಯಗಳು ಸೋರಿಕೆಯಾಗಿದ್ದವು. ಈ ಹಿನ್ನಲೆಯಲ್ಲಿ ಹೊಂಬಾಳೆ ಫಿಲಂಸ್ ವಿಡಿಯೋ ತುಣುಕು ಹಾಕಬೇಡಿ ಎಂದಿತ್ತು. ಆದರೂ ಕೆಲವರು ಕ್ಯಾರೇ ಎನ್ನದೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಹಲವು ಮೈನವಿರೇಳಿಸುವ ಸನ್ನಿವೇಶಗಳಿವೆ. ಇದನ್ನು ನೋಡಲೆಂದೇ ಜನ ಚಿತ್ರಮಂದಿರಕ್ಕೆ ಕಾಲಿಡುತ್ತಿದ್ದಾರೆ. ಮೊದಲ ದಿನವೇ ಚಿತ್ರ 60 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿತ್ತು.
ಆದರೆ ಈ ನಡುವೆ ಸಿನಿಮಾ ನೋಡಿದವರು ನಾನು ಸಿನಿಮಾ ನೋಡಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಮರ್ಶೆ ಬರೆದುಕೊಳ್ಳುವುದರ ಜೊತೆಗೆ ಚಿತ್ರದ ಪ್ರಮುಖ ದೃಶ್ಯಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಹೊಂಬಾಳೆ ಫಿಲಂಸ್ ಹೀಗೆ ಮಾಡಿದರೆ ಚಿತ್ರಕ್ಕೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿತ್ತು.
ಆದರೆ ಅದನ್ನೂ ಲೆಕ್ಕಿಸದೇ ಹಲವರು ಈಗ ಕ್ಲೈಮ್ಯಾಕ್ಸ್ ನ ಪ್ರಮುಖ ಸನ್ನಿವೇಶವನ್ನೇ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದಾರೆ. ಇದರಿಂದ ಮುಂದೆ ಸಿನಿಮಾ ನೋಡಬೇಕು ಎಂದುಕೊಂಡವರಿಗೂ ಕುತೂಹಲವೇ ಇಲ್ಲದಂತಾಗುತ್ತಿದೆ. ಜೊತೆಗೆ ಚಿತ್ರ ನೋಡುವವರ ಸಂಖ್ಯೆಗೂ ಹೊಡೆತ ಬೀಳಲಿದೆ.