ಬೆಂಗಳೂರು: ಕೆಲವೊಂದು ಸಿನಿಮಾಗಳು ಕೇವಲ ಸಿನಿಮಾವಲ್ಲ, ಎಷ್ಟೋ ವರ್ಷಗಳವರೆಗೂ ಜನರ ಬಾಯಲ್ಲಿ ಹರಿದಾಡುವಷ್ಟು ಮನಸ್ಸಿಗೆ ತಟ್ಟುತ್ತದೆ. ಅಂತಹದ್ದೇ ಒಂದು ಸಿನಿಮಾ ಕಾಂತಾರ ಅಧ್ಯಾಯ 1.
ಬೆಲ್ ಬಾಟಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮುಂತಾದ ಸಣ್ಣ ಬಜೆಟ್ ನ ಸಿನಿಮಾ ಮಾಡಿಕೊಂಡು ಜನರ ಮನಸ್ಸು ಸೆಳೆಯುತ್ತಿದ್ದ ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬಹುಕೋಟಿ ವೆಚ್ಚದ ಸಿನಿಮಾ ಮಾಡುತ್ತಿದ್ದಾರೆ. ಆದರೆ ಕೆಲವರು ಕೋಟಿ ಕೋಟಿ ಖರ್ಚು ಮಾಡಿದರೂ ಅದಕ್ಕೆ ತಕ್ಕ ಶ್ರಮ ಸ್ಕ್ರೀನ್ ಮೇಲೆ ಕಾಣಿಸಲ್ಲ.
ಆದರೆ ಕಾಂತಾರ ಚಾಪ್ಟರ್ ಸಿನಿಮಾದಲ್ಲಿ ಹಾಕಿದ ಪ್ರತಿಯೊಂದು ಪೈಸೆಯೂ ತೆರೆ ಮೇಲೆ ಕಾಣುತ್ತದೆ. ದುಡ್ಡು ಮಾತ್ರವಲ್ಲ, ಇಲ್ಲಿ ರಿಷಬ್ ಶೆಟ್ಟಿ ತಮ್ಮ ಕತೆಯನ್ನು, ಪಾತ್ರವನ್ನು ಪ್ರೀತಿಸಿದ್ದಾರೆ ಎಂಬುದು ಎದ್ದು ಕಾಣುತ್ತದೆ.
ಕಾಂತಾರ ಮೊದಲ ಸಿನಿಮಾ ನೋಡಿದಾಗ ಇದೊಂದು ಅಪ್ಪಟ ಕನ್ನಡ ಸಿನಿಮಾವೆನಿಸಿತ್ತು. ಕಾಂತಾರ ಚಾಪ್ಟರ್ 1 ನೋಡುವಾಗ ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾ ಮಾಡುವ ಒತ್ತಡದಲ್ಲಿ ರಿಷಬ್ ಎಲ್ಲಿ ಕಳೆದು ಹೋಗುತ್ತಾರೋ ಎನಿಸಿತ್ತು. ಆದರೆ ಅದನ್ನು ಅವರು ಬ್ಯಾಲೆನ್ಸ್ ಮಾಡುವಲ್ಲಿ ಸಮರ್ಥರಾಗಿದ್ದಾರೆ.
ಚಿತ್ರದ ಮೊದಲಾರ್ಧದಲ್ಲಿ ನಿಮಗೆ ಮೊದಲ ಕಾಂತಾರ ಕತೆಗೂ ಇದಕ್ಕೂ ಅಷ್ಟೊಂದು ಲಿಂಕ್ ಇದೆ ಎನಿಸುವುದಿಲ್ಲ. ಆದರೆ ಬಿಗುವಾದ ಚಿತ್ರ ಕತೆ, ಜೊತೆಗೆ ರಿಷಬ್ ಶೆಟ್ಟಿ ಆಕ್ಷನ್ ಗಮನ ಸೆಳೆಯುತ್ತದೆ. ಅದರಲ್ಲೂ ರಿಷಬ್ ಸಿನಿಮಾದ ಎಂದಿನ ಕಾಮಿಡಿ ಫ್ಲೇವರ್ ಕೂಡಾ ಕಾಣಬಹುದು. ರುಕ್ಮಿಣಿ ಇದ್ದಷ್ಟು ಹೊತ್ತು ಕಣ್ಣಿಗೆ ತಂಪು. ಮೊದಲಾರ್ಧದಲ್ಲಿ ಪ್ರೇಮ ಕತೆಯೂ ಇರುವುದರಿಂದ ಬೋರ್ ಆಗದು.
ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವುದು ರಿಷಬ್ ಶೆಟ್ಟಿ ಸಾಹಸ ದೃಶ್ಯಗಳು ಮತ್ತು ಅದಕ್ಕೆ ಹೊಂದುವಂತಹ ಅಜನೀಶ್ ಹಿನ್ನಲೆ ಸಂಗೀತ. ಮೈನವಿರೇಳಿಸುವ ಚೇಸಿಂಗ್ ದೃಶ್ಯಗಳು ಅದ್ಭುತ ಎನಿಸುವಂತಿದೆ. ಅಜನೀಶ್ ಕಾಂತಾರ ಮೊದಲ ಭಾಗದಂತೆ ಇಲ್ಲಿಯೂ ಅದ್ಭುತ ಹಾಡುಗಳು, ಹಿನ್ನಲೆ ಸಂಗೀತ ನೀಡಿದ್ದಾರೆ.
ಕನ್ನಡದಲ್ಲಿ ಇಂತಹದ್ದೊಂದು ಸಿನಿಮಾನೂ ತೆಗೆಯಬಹುದು ಎಂದು ತೋರಿಸಿಕೊಟ್ಟವರು ರಿಷಬ್. ಕೆಜಿಎಫ್ ಕನ್ನಡ ಚಿತ್ರರಂಗವನ್ನು ಒಂದು ಎತ್ತರಕ್ಕೆ ತೆಗೆದುಕೊಂಡು ಹೋದರೆ ಕಾಂತಾರ ಮತ್ತೊಂದು ಕಳಶದಂತಾಗುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಕನ್ನಡಿಗರು ಎಂದೆಂದಿಗೂ ನೆನಪಿಡುವಂತಹ ಸಿನಿಮಾವಾಗಲಿದೆ. ಯಾವುದೇ ಸಿನಿಮಾವನ್ನೂ ತಲೆಯಲ್ಲಿಟ್ಟುಕೊಳ್ಳದೇ, ಹೋಲಿಕೆ ಮಾಡದೇ ಚಿತ್ರಮಂದಿರಕ್ಕೆ ಹೋಗಿ. ನಿಮಗೆ ಪೈಸಾ ವಸೂಲಿ ಆಗುವುದಂತೂ ನಿಜ.