ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಈಗ ನಟಿ ತಾರಾ ಅನುರಾಧ ಅಂಬರೀಶ್ ಅವರಿಗೂ ಕೊಡಿ ಎಂದು ಡಿಕೆ ಶಿವಕುಮಾರ್ ಗೆ ಮನವಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಮತ್ತೊಬ್ಬ ಸ್ಟಾರ್ ನಟನಿಗೂ ಕೊಡುವಂತೆ ಆಗ್ರಹಿಸುತ್ತಿದ್ದಾರೆ.
ಈ ಬಾರಿ ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ ಸರೋಜಾದೇವಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ನಿನ್ನೆ ಹಿರಿಯ ನಟಿ ತಾರಾ ಅನುರಾಧ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ರೆಬಲ್ ಸ್ಟಾರ್ ಅಂಬರೀಶ್ ಅವರಿಗೂ ಕೊಡಿ ಎಂದು ಮನವಿ ಪತ್ರ ಸಲ್ಲಿಸಿದ್ದರು.
ವಿಷ್ಣುವರ್ಧನ್ ಮತ್ತು ಅಂಬರೀಶ್ ಚಿತ್ರರಂಗದಲ್ಲಿ ಕುಚಿಕು ಗೆಳೆಯರು ಎಂದೇ ಫೇಮಸ್. ಇಬ್ಬರೂ ತೆರೆಯ ಮೇಲೆ ಮಾತ್ರವಲ್ಲ, ವೈಯಕ್ತಿಕ ಬದುಕಿನಲ್ಲೂ ಒಬ್ಬರನ್ನು ಬಿಟ್ಟು ಒಬ್ಬರಿಲ್ಲ ಎನ್ನುವಂತಹ ಸ್ನೇಹಿತರು. ಹೀಗಾಗಿ ಇಬ್ಬರೂ ದಿಗ್ಗಜರಿಗೆ ಒಂದೇ ವೇದಿಕೆಯಲ್ಲಿ ಕರ್ನಾಟಕ ರತ್ನ ಸಿಗುವಂತಾಗಬೇಕು ಎಂದು ನಟಿ ತಾರಾ ಮನವಿ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ಈಗ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಶಂಕರ್ ನಾಗ್ ಅವರಿಗೂ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಶಂಕರ್ ನಾಗ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕೆಲಸ ಮಾಡಿದವರು. ಅವರು ತೀರಿಕೊಂಡು ಇಷ್ಟು ವರ್ಷಗಳಾದರೂ ಇಂದಿಗೂ ಜನ ಅವರನ್ನುಸ್ಮರಿಸಿಕೊಳ್ಳುತ್ತಿದ್ದಾರೆ. ಸಿನಿಮಾ ರಂಗ ಮಾತ್ರವಲ್ಲದೇ ನಮ್ಮ ಮೆಟ್ರೋ ಪರಿಕಲ್ಪನೆಯನ್ನು ಅಂದೇ ಸಾರಿ ಹೇಳಿದವರು. ಹೀಗಾಗಿ ಶಂಕರ್ ನಾಗ್ ಅವರಿಗೆ ಕರ್ನಾಟಕ ರತ್ನ ಕೊಡಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.