ಬೆಂಗಳೂರು: ಜ್ಯೂ. ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಇತ್ತೀಚೆಗೆ ಭಾರತೀಯ ಸೈನಿಕರೊಂದಿಗೆ ಕಳೆದ ಸುಂದರ ಕ್ಷಣದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.
ಕರ್ನಾಟಕದ ಒಬ್ಬ ಸೈನಿಕನ ಮನವಿ ಮೇರೆಗೆ ಶ್ರೀನಗರದಲ್ಲಿ ಭಾರತೀಯ ಸೈನಿಕರ ಗುಂಪೊಂದನ್ನು ಭೇಟಿ ಮಾಡಲು ಹೋಗಿದ್ದೆ. ಮೊದಲು ಅಲ್ಲಿ ಹೋಗಿ ನಾನೇನು ಮಾಡಲಿ? ಅವರಿಗೆ ನಾನು ತೊಂದರೆಯಾಗಬಹುದು ಎಂದು ಹಿಂಜರಿದಿದ್ದೆ. ಆದರೆ ಅಲ್ಲಿ ಹೋದ ಮೇಲೆ ಅವರು ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದು, 10-20 ನಿಮಿಷಗಳ ಕಾಲ ಖುಷಿಯಿಂದಲೇ ಕಾಲ ಕಳೆದಿದ್ದನ್ನು ಜೀವನ ಪರ್ಯಂತ ಮರೆಯಲು ಸಾಧ‍್ಯವಿಲ್ಲ.
ಅಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಂದು ಗಡಿ ಕಾಯುತ್ತಿರುವ ಹೆಮ್ಮೆಯ ಯೋಧರಿದ್ದರು. ಅವರು ತಮ್ಮ ಬಿಡುವಿನ ಸಮಯದಲ್ಲಿ ಸಿನಿಮಾ, ಕಿರುತೆರೆ ವೀಕ್ಷಿಸುವ ಬಗ್ಗೆ ಹೇಳಿಕೊಂಡರು. ಅದರಲ್ಲೂ ಇತ್ತೀಚೆಗಿನ ಪುಷ್ಪ ಸಿನಿಮಾವನ್ನು ಮೆಚ್ಚಿಕೊಂಡ ಸ್ಟೆಪ್ಸ್ ಕೂಡಾ ಹಾಕಿದರು. ಮತ್ತೆ ಕೆಲವರಿಗೆ ಅಮಿತಾಭ್ ಸರ್, ರಜನಿ ಸರ್, ಅಕ್ಷಯ್ ಕುಮಾರ್ ಸರ್, ರಾಕಿ ಭಾಯ್, ಡಿ ಬಾಸ್ ಸಿನಿಮಾಗಳೆಂದರೆ ಇಷ್ಟವಂತೆ. ನಾನು ನಮ್ಮ ಸಿನಿಮಾ ರಂಗದ ಕಲಾವಿದರಿಗೆ ಮನವಿ ಮಾಡುತ್ತೇನೆ, ಸಾಧ‍್ಯವಾದಾಗ ನೀವೂ ಒಮ್ಮೆ ಅಲ್ಲಿ ಹೋಗಿ ನಮ್ಮ ಯೋಧರೊಂದಿಗೆ ಕೆಲವು ಹೊತ್ತು ಕಳೆಯಿರಿ. ಅವರು ಮಾಡುವ ನಿಸ್ವಾರ್ಥ ಸೇವೆಗೆ ನಾವು ಬೇರೇನೂ ಕೊಡಲು ಸಾಧ‍್ಯವಿಲ್ಲ. ಈಗ ಕಾಶ್ಮೀರದಲ್ಲಿ ನನಗೆ ಹೊಸ ಕುಟುಂಬವೇ ಸಿಕ್ಕಿದೆ. ಈ ಅನುಭವವನ್ನು ನಾನು ಜೀವನ ಪರ್ಯಂತ ಮರೆಯಲು ಸಾಧ‍್ಯವಿಲ್ಲ ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ.