Publish Date: Tue, 08 Feb 2022 (10:38 IST)
Updated Date: Tue, 08 Feb 2022 (10:50 IST)
ನವದೆಹಲಿ: ಹೈದರಾಬಾದ್ ಭೇಟಿ ವೇಳೆ ಪ್ರಧಾನಿ ಮೋದಿ ಟಾಲಿವುಡ್ ಸಿನಿಮಾಗಳನ್ನು ಹೊಗಳಿ ಮಾತನಾಡಿದ್ದರು. ಆದರೆ ಇದಕ್ಕೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ಯಾಂಡಲ್ ವುಡ್ ಉಲ್ಲೇಖಿಸಿ ಟಾಂಗ್ ಕೊಟ್ಟಿದ್ದಾರೆ.
ತೆಲುಗು ಚಿತ್ರರಂಗ ಈಗ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಒಟಿಟಿ ಅಥವಾ ಥಿಯೇಟರ್ ಗಳಲ್ಲಿ ತೆಲುಗು ಸಿನಿಮಾಗಳು ಸದ್ದು ಮಾಡುತ್ತಿವೆ. ಭಾರತದ ಹೊರಗೂ ತೆಲುಗು ಸಿನಿಮಾಗಳನ್ನು ಜನ ವೀಕ್ಷಿಸುತ್ತಿದ್ದಾರೆ. ಟಾಲಿವುಡ್ ನಮ್ಮ ಹೆಮ್ಮೆ ಎಂದು ಪ್ರಧಾನಿ ಮೋದಿ ಹೊಗಳಿದ್ದರು.
ಇದಕ್ಕೀಗ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದು, ತೆಲುಗು ಚಿತ್ರರಂಗದವರು ಮೋದಿ ಮಾತು ಕೇಳಿ ಡ್ಯಾನ್ಸ್ ಮಾಡಬೇಕಿಲ್ಲ. ಮೋದಿ ಕೇವಲ ಬಾಹುಬಲಿ, ಪುಷ್ಪವನ್ನಷ್ಟೇ ಮನಸ್ಸಲ್ಲಿಟ್ಟುಕೊಂಡು ಹೊಗಳಿದ್ದಾರೆ. ವರ್ಷದಲ್ಲಿ ತಯಾರಾಗುವ ಇತರ 150 ಸಿನಿಮಾಗಳ ಬಗ್ಗೆ ಅವರು ಮಾತನಾಡಿಲ್ಲ. ಒಂದು ವೇಳೆ ಅಲ್ಲು ಅರ್ಜುನ್, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್ ವುಡ್ ನ್ನು ಹೊಗಳುತ್ತಿದ್ದರು ಎಂದಿದ್ದಾರೆ.
ಸದಾ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿ ಮಾಡುವ ರಾಮ್ ಗೋಪಾಲ್ ವರ್ಮಾ ಈಗ ಸ್ಯಾಂಡಲ್ ವುಡ್ ನಲ್ಲಿ ತೆಲುಗಿನಂತಹ ಗ್ಲೋಬಲ್ ಸ್ಟಾರ್ ಗಳಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.