ಬೆಂಗಳೂರು: ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂದು ನಿರ್ದೇಶಕ ಪ್ರೇಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಮಲ್ಟಿಪ್ಲೆಕ್ಸ್ ಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಸೌಂಡ್ ಗುಣಮಟ್ಟ ಕಡಿಮೆ ಮಾಡಲಾಗುತ್ತದೆ. ಆದರೆ ಪರಭಾಷೆಯ ಚಿತ್ರಗಳಿಗೆ ಗರಿಷ್ಠ ಸೌಂಡ್ ಮಟ್ಟವನ್ನು ನೀಡಲಾಗುತ್ತದೆ. ಇದರಿಂದ ಕನ್ನಡ ಸಿನಿಮಾಗಳ ಹಿನ್ನಲೆ ಧ್ವನಿ ಪ್ರೇಕ್ಷಕರಿಗೆ ತಲುಪಲ್ಲ. ಇದರಿಂದ ಸಿನಿಮಾ ಪ್ರಭಾವಶಾಲಿ ಎನಿಸಲ್ಲ. ಈ ಹಿಂದೆ ನನ್ನ ವಿಲನ್ ಸಿನಿಮಾಗೂ ಇದೇ ರೀತಿ ಆಗಿತ್ತು. ಕೇವಲ ನನ್ನ ಸಿನಿಮಾ ಮಾತ್ರವಲ್ಲ ಎಲ್ಲಾ ಕನ್ನಡ ಸಿನಿಮಾಗಳಿಗೂ ಇದೇ ರೀತಿ ಆಗುತ್ತಿದೆ ಎಂದು ಅವರು ದೂರಿದ್ದಾರೆ.
ಇನ್ನು, ಕರ್ನಾಟಕದಲ್ಲಿ ಯುಎಫ್ ಒ ಕಚೇರಿಯಿಲ್ಲ. ಹೀಗಾಗಿ ಯುಎಫ್ ಒ ಅಥವಾ ಕ್ಯೂಬ್ ಗೆ ಸಿನಿಮಾ ಅಪ್ ಲೋಡ್ ಮಾಡಲು ದಿನಗಟ್ಟಲೆ ಕಾಯಬೇಕಾಗುತ್ತದೆ. ಎಲ್ಲಾ ರಾಜ್ಯಗಳಲ್ಲೂ ಅವರದ್ದೇ ಸಿನಿಮಾಗಳಿಗಾಗಿ ಪ್ರತ್ಯೇಕ ಯುಎಫ್ ಒ ಕಚೇರಿಯಿದೆ. ಕರ್ನಾಟಕದಲ್ಲೂ ಈ ವ್ಯವಸ್ಥೆಯಾಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.