ಅಹಮ್ಮದಾಬಾದ್: ಐಪಿಎಲ್ 2022 ರಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದ್ದು, ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರಸ್ಪರ ಸೆಣಸಾಡಲಿವೆ.
ರಾಜಸ್ಥಾನ್ ರಾಯಲ್ಸ್ ಈ ಮೊದಲು ಶೇನ್ ವಾರ್ನ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಅದಾದ ಬಳಿಕ ಯಾಕೋ ರಾಜಸ್ಥಾನ್ ಆರಕ್ಕೇರದ ಮೂರಕ್ಕಿಳಿಯದ ಆಟವಾಡಿತ್ತು. 2008 ರಲ್ಲಿ ಐಪಿಎಲ್ ಆರಂಭವಾದಾಗ ಮೊದಲ ಬಾರಿಗೆ ಚಾಂಪಿಯನ್ ಆದ ಹಿರಿಮೆ ರಾಜಸ್ಥಾನ್ ನದ್ದು. ಅದಾದ ಬಳಿಕ ಎಷ್ಟೋ ನಾಯಕರು, ಆಟಗಾರರು ಬಂದು ಹೋದರೂ ಅದೃಷ್ಟ ಖುಲಾಯಿಸಿರಲಿಲ್ಲ. ಆದರೆ ಈ ಬಾರಿ ಮತ್ತೆ ಚಾಂಪಿಯನ್ ಆಗುವ ಸದವಕಾಶ ರಾಜಸ್ಥಾನ್ ಗಿದೆ. ಜೋಸ್ ಬಟ್ಲರ್ ಭರ್ಜರಿ ಫಾರ್ಮ್ ತಂಡಕ್ಕೆ ಪ್ಲಸ್ ಪಾಯಿಂಟ್. ಜೊತೆಗೆ ಬೌಲರ್ ಗಳಲ್ಲೂ ಪ್ರಸಿದ್ಧ ಕೃಷ್ಣ, ಮೆಕೊಯ್, ಅಶ್ವಿನ್ ಸೇರಿದಂತೆ ಪ್ರತಿಭಾವಂತರ ಗಡಣವೇ ಇದೆ. ಇದನ್ನು ಸಂಜು ಸ್ಯಾಮ್ಸನ್ ಬಳಗ ಯಾವ ರೀತಿ ಬಳಸಿಕೊಳ್ಳುತ್ತೆ ನೋಡಬೇಕು.
ಇತ್ತ ಗುಜರಾತ್ ಟೈಟನ್ಸ್ ಗೆ ಇದು ಚೊಚ್ಚಲ ಕೂಟ. ಒಂದು ವೇಳೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಗೆದ್ದರೆ ಚೊಚ್ಚಲ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದ ದಾಖಲೆ ಮಾಡಲಿದೆ. ಲೀಗ್ ಹಂತಗಳಿಂದ ಇಲ್ಲಿಯವರೆಗೆ ಗುಜರಾತ್ ನಡೆದುಕೊಂಡ ಬಂದ ರೀತಿ ನೋಡಿದರೆ ಇಂದು ಗೆಲುವು ಕಷ್ಟವಲ್ಲ. ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾತಿಯಾ, ಮೊಹಮ್ಮದ್ ಶಮಿ ಸೇರಿದಂತೆ ಘಟಾನುಘಟಿಗಳು ಗುಜರಾತ್ ನಲ್ಲಿದ್ದಾರೆ. ಹೀಗಾಗಿ ಇದು ಪರ್ಫೆಕ್ಟ್ ಫೈನಲ್ ಆಗುವುದರಲ್ಲಿ ಸಂಶಯವಿಲ್ಲ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.