ಅಹಮ್ಮದಾಬಾದ್: ಐಪಿಎಲ್ 2022 ರಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಮತ್ತೆ ಆರ್ ಸಿಬಿ ಪಾಲಿಗೆ ಕನಸಾಗಿಯೇ ಉಳಿದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿಬಿಗೆ 7 ವಿಕೆಟ್ ಗಳ ಸೋಲಾಗಿದೆ. ಇದಕ್ಕೆ ಕಾರಣವಾಗಿದ್ದು ಜೋಸ್ ಬಟ್ಲರ್ ಭರ್ಜರಿ ಶತಕ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಪ್ರಮುಖ ಬ್ಯಾಟಿಗರು ಕೈ ಕೊಟ್ಟರು. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ಸೇರಿದಂತೆ ಬಿಗ್ ಥ್ರೀ ಬ್ಯಾಟಿಗರು ವೈಫಲ್ಯ ಅನುಭವಿಸಿದರು. ನಾಯಕ ಫಾ ಡು ಪ್ಲೆಸಿಸ್ ನಿಧಾನಗತಿಯ ಇನಿಂಗ್ಸ್ ಆಗಿ 25 ರನ್ ಗಳಿಸಿದರೆ, ಕಳೆದ ಪಂದ್ಯದ ಹೀರೋ ರಜತ್ ಪಟಿದಾರ್ ಸಿಡಿದು 58 ರನ್ ಗಳ ಕಾಣಿಕೆ ನೀಡಿದರು. ಆದರೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಗರಿಂದ ಯಾವುದೇ ಕೊಡುಗೆ ಬರಲಿಲ್ಲ. 15 ಓವರ್ ಗಳವರೆಗೂ ಸುಸ್ಥಿತಿಯಲ್ಲಿದ್ದ ಆರ್ ಸಿಬಿ ಬಳಿಕ ಕುಸಿಯುತ್ತಾ ಸಾಗಿತು. ಪರಿಣಾಮ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದು ರಾಜಸ್ಥಾನ್ ಬಲಿಷ್ಠ ಬ್ಯಾಟಿಂಗ್ ಎದುರು ಏನೇನೂ ಮೊತ್ತವಾಗಿರಲಿಲ್ಲ. ಮತ್ತೆ ಸಿಡಿದ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿ 106 ರನ್ ಗಳಿಸಿ ಅಜೇಯರಾಗುಳಿದರು. ತಕ್ಕ ಸಾಥ‍್ ನೀಡಿದ ಯಶಸ್ವಿ ಜೈಸ್ವಾಲ್ 21, ಸಂಜು ಸ್ಯಾಮ್ಸನ್ 23 ರನ್ ಗಳ ಕೊಡುಗೆ ನೀಡಿದರು. ಇದರಿಂದಾಗಿ ರಾಜಸ್ಥಾನ್ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 161 ರನ್ ಗಳಿಸುವ ಮೂಲಕ ಎರಡನೆಯ ತಂಡವಾಗಿ ಐಪಿಎಲ್ 2022 ರ ಫೈನಲ್ ಗೇರಿತು.