ಇಸ್ಲಾಮಾಬಾದ್: ಜಮ್ಮು ಕಾಶ್ಮೀರ ಪಹಲ್ಗಾಮ್ ನಲ್ಲಿ ನಾವೇ ಉಗ್ರರ ಮೂಲಕ ದಾಳಿ ಮಾಡಿಸಿದ್ದೇವೆ ಎನ್ನುವುದಕ್ಕೆ ಸಾಕ್ಷ್ಯ ಏನಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರಶ್ನೆ ಮಾಡಿದ್ದಾರೆ.
ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಆಕ್ರೋಶಗೊಂಡಿದೆ. ಇದರ ಪರಿಣಾಮ ಪಾಕ್ ನಾಗರಿಕರ ವೀಸಾ ರದ್ದು ಮಾಡಿ, ಸಿಂಧೂ ನದಿ ನೀರು ಬಿಡದೇ ಒಂದಾದ ಮೇಲೊಂದರಂತೆ ಪೆಟ್ಟು ಕೊಡುತ್ತಿದೆ.
ಇದರ ಬೆನ್ನಲ್ಲೇ ಶಾಹಿದ್ ಅಫ್ರಿದಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಾವು ನೆರೆಯ ರಾಷ್ಟ್ರಗಳಾಗಿದ್ದೇವೆ. ಈ ಘಟನೆ ನಡೆದಾಗ ನೀವು ನೇರವಾಗಿ ಪಾಕಿಸ್ತಾನದ ಮೇಲೆ ಆರೋಪ ಹೊರಿಸಿದ್ದೀರಿ. ಪಾಕಿಸ್ತಾನವೇ ಕೃತ್ಯವೆಸಗಿದೆ ಎನ್ನುವುದಕ್ಕೆ ಕನಿಷ್ಠ ಪುರಾವೆಗಳೊಂದಿಗೆ ಬನ್ನಿ. ಅದನ್ನು ಜಗತ್ತಿನ ಮುಂದಿಡಿ. ಅದರ ಹೊರತಾಗಿ ಪುರಾವೆಗಳಿಲ್ಲದೇ ನಮ್ಮನ್ನು ದೂರಬೇಡಿ ಎಂದು ಅಫ್ರಿದಿ ಹೇಳಿದ್ದಾರೆ.
ಉಗ್ರರನ್ನು ಪೋಷಿಸುತ್ತಿರುವುದು ಪಾಕಿಸ್ತಾನ ಎನ್ನುವುದು ಇಡೀ ವಿಶ್ವಕ್ಕೇ ಗೊತ್ತಿರುವ ಸತ್ಯ. ಪ್ರತೀ ಬಾರಿ ಉಗ್ರರು ದಾಳಿ ನಡೆಸಿದಾಗಲೂ ಪಾಕಿಸ್ತಾನ ಇದೇ ವರಸೆ ತೋರಿಸುತ್ತದೆ. ಈಗ ಅಫ್ರಿದಿ ಕೂಡಾ ಅದನ್ನೇ ಮಾಡಿದ್ದಾರೆ.