ಇಸ್ಲಾಮಾಬಾದ್: ಸಿಂಧೂ ನದಿ ನೀರು ಹರಿಸದೇ ಇದ್ದರೆ ನಾವು ಭಾರತದಲ್ಲಿ ರಕ್ತ ಹರಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಪಿಪಿಪಿ ಪಕ್ಷದ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಎಚ್ಚರಿಕೆ ನೀಡಿದ್ದಾನೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಲಾವಲ್ ಇಂತಹದ್ದೊಂದು ಬೆದರಿಕೆ ಹಾಕಿದ್ದಾನೆ. ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ ಭಾರತದ ಅಮಾಯಕ ಪ್ರವಾಸಿಗರ ಪ್ರಾಣ ತೆಗೆದ ಬಳಿಕ ರೊಚ್ಚಿಗೆದ್ದಿರುವ ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದವನ್ನು ಮುರಿದುಕೊಂಡಿತ್ತು.
ಇದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿದೆ. ಸಿಂಧೂ ನದಿ ನೀರು ಪಾಕಿಸ್ತಾನದ ಶೇ.80 ರಷ್ಟು ನೀರಿನ ಅಗತ್ಯ ಪೂರೈಸುತ್ತದೆ. ಹೀಗಾಗಿಯೇ ಈಗ ಭಾರತದ ನಿರ್ಧಾರದಿಂದ ಪಾಕಿಸ್ತಾನಕ್ಕೆ ದಿಕ್ಕೇ ತೋಚದಂತಾಗಿದೆ.
ಇದರ ಬೆನ್ನಲ್ಲೇ ಬಿಲಾವಲ್ ಭುಟ್ಟೋ ಭಾರತದಲ್ಲಿ ರಕ್ತಪಾತ ಹರಿಸುವ ಬೆದರಿಕೆ ಹಾಕಿದ್ದಾನೆ. ಸಿಂಧೂ ನದಿ ನೀರು ನಮ್ಮದು. ಇದು ಪಾಕಿಸ್ತಾನ ಪ್ರಜೆಗಳ ಜೀವನದಿ. ಸಿಂಧೂ ನದಿ ನೀರನ್ನು ಬಿಡದೇ ಹೋದರೆ ತಕ್ಕ ಉತ್ತರ ಕೊಡಬೇಕಾಗುತ್ತದೆ. ನದಿ ನೀರನ್ನು ತಡೆಯಬಾರದು. ದೇಶದ ಸಮಗ್ರತೆ ಮತ್ತು ಭದ್ರತೆ ವಿಚಾರದಲ್ಲಿ ನಾವು ರಾಜಿಯಾಗಲ್ಲ ಎಂದಿದ್ದಾರೆ.