ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದ ಬಳಿಕ ಪಾಕಿಸ್ತಾನದ ಮೇಲೆ ಆಕ್ರೋಶಗೊಂಡಿರುವ ಭಾರತ ಸಿಂಧೂ ನದಿ ಒಪ್ಪಂದ ಮುರಿದುಕೊಂಡಿದೆ. ಈ ಒಪ್ಪಂದ ಮುರಿದ ಬಳಿಕ ಈಗ ಪಾಕಿಸ್ತಾನಕ್ಕೆ ಒಂದು ಹನಿ ನೀರೂ ಹೋಗದಂತೆ ತಡೆಯಲು ಭಾರತ ಮಾಡಿಕೊಂಡಿರುವ ಉಪಾಯಗಳೇನು ನೋಡಿ.
ಪಹಲ್ಗಾಮ್ ನಲ್ಲಿ ದಾಳಿಗೆ ಪ್ರತೀಕಾರವಾಗಿ ಭಾರತ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ಮಾಡಲು ಮುಂದಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ನೀರಿಗಾಗಿ ಹಾಹಾಕಾರವೇರ್ಪಡಲಿದೆ. ಯಾಕೆಂದರೆ ಪಾಕಿಸ್ತಾನದ ಶೇ.80 ರಷ್ಟು ಅಗತ್ಯಗಳನ್ನು ಸಿಂಧೂ ನದಿ ನೀರು ಪೂರೈಸುತ್ತಿತ್ತು.
ಆದರೆ ಎಲ್ಲಾ ಸರಿ, ಹರಿಯುವ ನದಿ ನೀರನ್ನು ಪಾಕಿಸ್ತಾನ ಸೇರದಂತೆ ಭಾರತ ಮಾಡಿಕೊಂಡಿರುವ ಉಪಾಯಗಳೇನು? ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಜಲಸಂಪನ್ಮೂಲ ಸಚಿವ ಸಿ ಆರ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಕೇಂದ್ರ ಈಗ ಮೂರು ಹಂತದ ಯೋಜನೆ ಹಾಕಿಕೊಂಡಿದೆ. ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿಯ ಸೂತ್ರ ಹಾಕಿಕೊಂಡಿದೆ.
ಸದ್ಯಕ್ಕೆ ಪಾಕಿಸ್ತಾನಕ್ಕೆ ನೀರು ಹರಿಯದಂತೆ ನದಿ ನೀರನ್ನು ಬೇರೆಡೆ ತಿರುಗಿಸಲು ಮತ್ತು ನದಿಗಳ ಹೂಳೆತ್ತುವ ಕೆಲಸ ತಕ್ಷಣವೇ ಮಾಡಲು ಮುಂದಾಗಿದೆ. ಇದರಿಂದಾಗಿ ನದಿ ನೀರು ಶತ್ರು ರಾಷ್ಟ್ರದ ಕಡೆಗೆ ಹರಿಯದಂತೆ ತಡೆಯಲಾಗುತ್ತದೆ.