ಬೆಂಗಳೂರು: ಪಹಲ್ಗಾಮ್ ದಾಳಿ ಹಿನ್ನಲೆಯಲ್ಲಿ ಕೇಂದ್ರದಿಂದ ಆದೇಶ ಬಂದ ಬೆನ್ನಲ್ಲೇ ರಾಜ್ಯದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ಶೀಘ್ರದಲ್ಲೇ ವಾಪಸ್ ಕಳುಹಿಸಲಾಗುವುದು ಎಂದು ಗೃಹಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ತಕ್ಷಣವೇ ಅವರ ದೇಶಕ್ಕೆ ಕಳುಹಿಸಿ ಎಂದು ಖಡಕ್ ಸಂದೇಶ ರವಾನಿಸಿದ್ದರು.
ಅದರಂತೆ ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಜಿ ಪರಮೇಶ್ವರ್, ರಾಜ್ಯದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಗಡೀಪಾರು ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದಾಗಿ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಅದರಂತೆ ಪಾಕಿಸ್ತಾನ ಪ್ರಜೆಗಳ ವೀಸಾ ರದ್ದುಗೊಳಿಸಲಾಗಿದೆ. ಹೀಗಾಗಿ ಅವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕೇಂದ್ರದ ಈ ಕ್ರಮಕ್ಕೆ ರಾಜ್ಯವೂ ಸಹಕಾರ ನೀಡಲಿದೆ ಎಂದು ಅವರು ಹೇಳಿದ್ದಾರೆ. ಅನಧಿಕೃತವಾಗಿ ಇಲ್ಲಿ ನೆಲೆಸಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದೇವೆ ಎಂದಿದ್ದಾರೆ.