ಇಸ್ಲಾಮಾಬಾದ್: ಸದಾ ಯಡವಟ್ಟು, ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಈಗ ಭಾರತವನ್ನು ಹೂತು ಹಾಕ್ತೇವೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಮೊನ್ನೆಯಷ್ಟೇ ಭಾರತದ ಭೂಸೇನಾ ನಾಯಕ ಜನರಲ್ ಉಪೇಂದ್ರ ದ್ವಿವೇದಿ, ಪಾಕಿಸ್ತಾನ ಇದೇ ರೀತಿ ಭಯೋತ್ಪಾದಕರಿಗೆ ಕುಮ್ಮಕ್ಕು ಮುಂದುವರಿಸಿದರೆ ಭೂಪಟದಲ್ಲೇ ಇಲ್ಲದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಈಗ ಖ್ವಾಜಾ ಆಸಿಫ್ ಪ್ರತಿಕ್ರಿಯಿಸಿದ್ದಾರೆ. ಭಾರತವನ್ನು ಅದರದ್ದೇ ಯುದ್ಧ ವಿಮಾನಗಳ ಅವಶೇಷಗಳ ಅಡಿ ಹೂತು ಹಾಕುತ್ತೇವೆ ಎಂದು ಕೊಚ್ಚಿ ಕೊಂಡಿದ್ದಾರೆ. ಅಷ್ಟೇ ಅಲ್ಲ ನಮ್ಮದು ಅಲ್ಲಾಹನ ಹೆಸರಿನಲ್ಲಿ ನಿರ್ಮಾಣವಾದ ರಾಷ್ಟ್ರ. ಪಾಕಿಸತಾನದ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಅಲ್ಲಾಹನ ಸೈನಿಕರು. ಈ ಬಾರಿ ಭಾರತವು ಅದರದ್ದೇ ವಿಮಾನಗಳ ಅವಶೇಷಗಳಡಿ ಹೂತು ಹೋಗಲಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಇನ್ನು ನಮ್ಮನ್ನು ಭೂಪಟದಿಂದ ಇಲ್ಲದಂತೆ ಮಾಡುತ್ತೇವೆ ಎಂದ ಭಾರತ ಕಳೆದು ಹೋದ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯಲು ವಿಫಲ ಯತ್ನ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.