ವಾಷಿಂಗ್ಟನ್: ಒಂದು ವೇಳೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದಾದರೆ ನಮ್ಮ ಜೊತೆಗೆ ಅರ್ಧಪ್ರಪಂಚವನ್ನೇ ಮುಳುಗಿಸಲೂ ನಾವು ಹೇಸಲ್ಲ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಮುನೀರ್ ಹೇಳಿಕೆ ನೀಡಿದ್ದಾರೆ.
ಅಮೆರಿಕಾಗೆ ಭೇಟಿ ನೀಡಿರುವ ಅವರು ಭಾರತಕ್ಕೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆ ಹಾಕಿದ್ದಾರೆ. ನಮ್ಮದು ಪರಮಾಣು ರಾಷ್ಟ್ರ. ನಾವು ಕುಸಿಯುತ್ತೇವೆ ಎಂದಾದರೆ ನಮ್ಮ ಜೊತೆಗೆ ಅರ್ಧ ಪ್ರಪಂಚವನ್ನೂ ನಾಶಪಡಿಸುತ್ತೇವೆ ಎಂದಿದ್ದಾರೆ.
ಭೋಜನ ಕೂಟವೊಂದರಲ್ಲಿ ಪಾಲ್ಗೊಂಡಿದ್ದ ಅವರು ಭಾರತ ತನ್ನ ದೇಶದೊಂದಿಗೆ ಸಿಂಧೂ ನದಿ ಒಪ್ಪಂದ ಮುರಿದಿರುವುದನ್ನೂ ಟೀಕಿಸಿದ್ದಾರೆ. ಸಿಂಧೂ ನದಿ ಒಪ್ಪಂದ ಮುರಿಯುವುದರಿಂದ 250 ಮಿಲಿಯನ್ ಜನ ಹಸಿವಿನಿಂದ ಸಾಯುವ ಅಪಾಯಕ್ಕೆ ಸಿಲುಕಬಹುದು ಎಂದಿದ್ದಾರೆ.
ಭಾರತವು ನಮ್ಮಿಂದ ಸಿಂಧೂ ನದಿ ನೀರು ಕಸಿಯಲು ಅಣೆಕಟ್ಟು ನಿರ್ಮಿಸಿದರೆ ಅದನ್ನು ನಾವು ಸ್ಪೋಟಿಸುತ್ತೇವೆ ಎಂದಿದ್ದಾರೆ. ಭಾರತದ ಆಪರೇಷನ್ ಸಿಂಧೂರದ ಬಳಿ ಆಸಿಫ್ ಮುನೀರ್ ಇದು ಎರಡನೆಯ ಬಾರಿಗೆ ಅಮೆರಿಕಾಗೆ ಭೇಟಿ ನೀಡಿದ್ದಾರೆ. ಇದಕ್ಕೆ ಮೊದಲು ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಆಹ್ವಾನವಿತ್ತು ಕರೆಸಿಕೊಂಡಿದ್ದರು.