ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ 5 ಜೆಟ್ ಹೊಡೆದುರುಳಿಸಲಾಗಿತ್ತು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಕ್ಯಾತೆ ತೆಗೆದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಬಗ್ಗೆ ಪದೇ ಪದೇ ಹೇಳಿಕೆ ನೀಡಿ ಭಾರತಕ್ಕೆ ಇರಿಸುಮುರಿಸು ಉಂಟುಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಇಂದು ಮತ್ತೆ ಅದೇ ರೀತಿಯ ಹೇಳಿಕೆ ನೀಡಿದ್ದಾರೆ. 5 ಜೆಟ್ ಹೊಡೆದುರುಳಿಸಲಾಗಿತ್ತು ಎಂದಿದ್ದಾರೆ. ಆದರೆ ಯಾವ ದೇಶದ ಜೆಟ್ ಎಂಬುದನ್ನು ಹೇಳಿಲ್ಲ.
ಈ ಹಿಂದೆ ಭಾರತ, ಪಾಕಿಸ್ತಾನ ಕದನ ನಿಲ್ಲಿಸಿದ್ದು ನಾನೇ ಎಂದು ಹೇಳಿಕೊಂಡಿದ್ದರು. ಅವರ ಈ ಹೇಳಿಕೆ ಭಾರತದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಅದೇ ಮಾತು ಹೇಳಿದ್ದಾರೆ. ಭಾರತ-ಪಾಕಿಸ್ತಾನ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಗಂಭೀರವಾಗಿತ್ತು. ಸುಮಾಯು ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಎರಡೂ ರಾಷ್ಟ್ರಗಳು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳಾಗಿತ್ತು. ಹೀಗಾಗಿ ವ್ಯಾಪಾರದ ಬಗ್ಗೆ ಒಂದು ಸಣ್ಣ ಬೆದರಿಕೆ ಹಾಕಿ ಎರಡೂ ರಾಷ್ಟ್ರಗಳ ಕದನ ನಿಲ್ಲಿಸಿದೆ ಎಂದು ಟ್ರಂಪ್ ಕೊಚ್ಚಿಕೊಂಡಿದ್ದಾರೆ.