ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇದೀಗ ಶಾಸಕರ ಅಸಮಾಧಾನಕ್ಕೆ ಮಣಿದು ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಶಾಸಕರಿಗೆ ಹಚ್ಚು ಬಿಜೆಪಿ ಶಾಸಕರಿಗೆ ಕಡಿಮೆ ಕೊಟ್ಟಿದ್ದಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ಬಿಜೆಪಿ ಶಾಸಕರಿಗೆ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರ ಬಗ್ಗೆ ಬಿಜೆಪಿ ಅನುದಾನದಲ್ಲೂ ತಾರತಮ್ಯ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡ್ತೀವಿ, ವಿಪಕ್ಷದವರು ಕೊಂಚ ತಾಳ್ಮೆಯಿಂದ ಕಾಯಬೇಕಷ್ಟೇ ಎಂದಿದ್ದರು.
ಇದು ಆರ್ ಅಶೋಕ್ ಅವರನ್ನು ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಕ್ಷೇತ್ರದ ಅನುದಾನಕ್ಕಾಗಿ ವಿಪಕ್ಷದ ಶಾಸಕರು ತಾಳ್ಮೆಯಿಂದ ಕಾಯಬೇಕು ಎಂದರೆ ಏನು ಸ್ವಾಮಿ?
ತಾವು ಈ ಮೊದಲೇ ಹೇಳಿರುವಂತೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎನ್ನುವುದು ನಿಮ್ಮ ಮಾತಿನ ಅರ್ಥಾನಾ? ಅಥವಾ ತಾಳ್ಮೆಯಿಂದ ಇರದಿದ್ದರೆ ನಟ್ಟು-ಬೋಲ್ಟು ಟೈಟು ಮಾಡುತ್ತೇನೆ ಎನ್ನುವ ಧಮ್ಕಿನಾ?
ತಮಗೆ ಇಷ್ಟ ಬಂದ ಹಾಗೆ ಬರೀ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡೋಕೆ ರಾಜ್ಯ ಸರ್ಕಾರದ ಖಜಾನೆ ನಿಮ್ಮ ಕಾಂಗ್ರೆಸ್ ಪಕ್ಷದ ಪಾರ್ಟಿ ಫಂಡ್ ಅಲ್ಲ ಡಿ.ಕೆ.ಶಿವಕುಮಾರ್ ಅವರೇ, ಅದು ಆರೂವರೆ ಕೋಟಿ ಕನ್ನಡಿಗರ ಬೆವರಿನ ತೆರಿಗೆ ಹಣ. ಈ ಮಲತಾಯಿ ದೋರಣೆ ನಿಲ್ಲಿಸಿ, ಎಲ್ಲಾ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.