ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರ ದಾಳಿ ನಡೆದ ಬಳಿಕ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಸಮರ ಸಾರಿತ್ತು. ಅದರ ಭಾಗವಾಗಿ ಪಾಕಿಸ್ತಾನದ ಚಾನೆಲ್ ಗಳು, ಯೂ ಟ್ಯೂಬ್ ಚಾನೆಲ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು. ಆದರೆ ಈಗ ನಿಷೇಧ ವಾಪಸ್ ಪಡೆದಿದೆ.
ಭಾರತದಲ್ಲಿ ಪಾಕಿಸ್ತಾನಿ ಕ್ರಿಕೆಟಿಗರ ಸೋಷಿಯಲ್ ಮೀಡಿಯಾ ಖಾತೆಗಳು, ಯೂ ಟ್ಯೂಬ್ ಚಾನೆಲ್ ಗಳು, ಸುದ್ದಿ ವಾಹಿನಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಅದರಂತೆ ಪಾಕಿಸ್ತಾನಿಯರಿಗೆ ಭಾರತದಲ್ಲಿ ವೀಕ್ಷಕರು ಸಿಗದೇ ನಷ್ಟವಾಗಿತ್ತು.
ಆದರೆ ಈಗ ಆಪರೇಷನ್ ಸಿಂಧೂರ್ ನಡೆದು ತಿಂಗಳಾದ ಬೆನ್ನಲ್ಲೇ ಭಾರತ ಸದ್ದಿಲ್ಲದೇ ಯೂ ಟ್ಯೂಬ್ ವಾಹಿನಿಗಳು, ಸುದ್ದಿ ಸಂಸ್ಥೆಗಳ ಮೇಲಿನ ನಿಷೇಧ ವಾಪಸ್ ತೆಗೆದುಕೊಂಡಿದೆ ಎನಿಸುತ್ತಿದೆ. ಯಾಕೆಂದರೆ ಈ ಎಲ್ಲಾ ಚಾನೆಲ್ ಗಳು ಈಗ ಭಾರತದಲ್ಲಿ ಮತ್ತೆ ಪ್ರಸಾರ ಕಾಣುತ್ತಿದೆ. ಆದರೆ ಕ್ರಿಕೆಟಿಗರ ಸೋಷಿಯಲ್ ಮೀಡಿಯಾ ಖಾತೆಗಳು ಮಾತ್ರ ಈಗಲೂ ಬ್ಯಾನ್ ಆಗಿಯೇ ಇದೆ.
ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಅಮಾಯಕರ ಮೇಲೆ ಉಗ್ರರು ದಾಳಿ ನಡೆಸಿ 27 ಜನರ ಸಾವಿಗೆ ಕಾರಣವಾಗಿ ಎರಡು ತಿಂಗಳಾಗಿಲ್ಲ. ಆಗಲೇ ನಿಷೇಧ ವಾಪಸ್ ಮಾಡಿದ್ದು ಯಾಕೆ? ಇದಕ್ಕೆ ಒಪ್ಪಿಗೆ ಕೊಟ್ಟವರು ಯಾರು? ಹಾಗಿದ್ದರೆ ನಿಷೇಧ ಹೇರಿ ಏನು ಉಪಯೋಗವಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಶೊಯೇಬ್ ಅಖ್ತರ್ ಸೇರಿದಂತೆ ಖ್ಯಾತ ಕ್ರಿಕೆಟಿಗರ ಯೂ ಟ್ಯೂಬ್ ಚಾನೆಲ್ ಗಳೆಲ್ಲವೂ ಈಗ ಮರಳಿ ವೀಕ್ಷಣೆಗೆ ಲಭ್ಯವಿದೆ. ಇದನ್ನೀಗ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅಷ್ಟು ಅಮಾಯಕರ ಜೀವಕ್ಕೆ ಬೆಲೆಯಿಲ್ಲದೇ ಹೋಯ್ತು ಎಂದು ಕಿಡಿ ಕಾರಿದ್ದಾರೆ.