ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಅಗತ್ಯವಸ್ತುಗಳ ಬೆಲೆಯೂ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ನಡುವೆ ಕೇಂದ್ರ ಸರ್ಕಾರ ಕೆಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್ ಟಿ ಕಡಿತ ಮಾಡಲು ಮುಂದಾಗಿದ್ದು ಇದರಿಂದ ಯಾವೆಲ್ಲಾ ವಸ್ತುಗಳು ಅಗ್ಗವಾಗಲಿದೆ ಇಲ್ಲಿದೆ ವಿವರ.
ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ದಿನನಿತ್ಯ ಬಳಕೆ ಮಾಡುವ ವಸ್ತುಗಳ ಮೇಲಿನ ಜಿಎಸ್ ಟಿ ಕಡಿತ ಮಾಡಿ ಆ ವರ್ಗದವರಿಗೆ ನಿರಾಳತೆ ನೀಡಲು ಕೇಂದ್ರ ಮುಂದಾಗಿದೆ. ಜಿಎಸ್ ಟಿಯ ಶೇ.12 ರಷ್ಟು ಸ್ಲ್ಯಾಬ್ ರದ್ದುಗೊಳಿಸುವ ಅಥವಾ ಆ ಸ್ಲ್ಯಾಬ್ ನಲ್ಲಿರುವ ಅಗತ್ಯ ವಸ್ತುಗಳನ್ನು ಶೇ.5 ರ ಸ್ಲ್ಯಾಬ್ ಗೆ ವರ್ಗಾಯಿಸಿ ಬೆಲೆ ಕಡಿತಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರ ಇದನ್ನು ಜಾರಿಗೊಳಿಸಿದಲ್ಲಿ ದಿನನಿತ್ಯ ಬಳಸುವ ಅನೇಕ ವಸ್ತುಗಳು ಇನ್ನಷ್ಟು ಅಗ್ಗವಾಗಲಿದೆ. ದಿನನಿತ್ಯ ಬಳಸುವ ಸೋಪ್, ಟೂತ್ ಪೇಸ್ಟ್ ಸೇರಿ ಹಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಇದರಿಂದ ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ.
ಟೂತ್ ಪೇಸ್ಟ್, ಸೋಪ್, ವಾಷಿಂಗ್ ಮೆಷಿನ್, ಸ್ಟೇಷನರಿ ವಸ್ತುಗಳು, ವಾಟರ್ ಹೀಟರ್, 1,000 ರೂ ಮೇಲ್ಪಟ್ಟ ರೆಡಿಮೇಡ್ ಉಡುಪುಗಳು, 1000 ರೂ. ಒಳಗಿನ ಪಾದರಕ್ಷೆಗಳು, ಅಲ್ಯುಮಿನಿಯಂ ಪಾತ್ರೆಗಳು, ಪ್ರೆಷರ್ ಕುಕ್ಕರ್, ಕೇಶ ತೈಲ ಇತ್ಯಾದಿ ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಕಡಿಮೆಯಾಗಲಿದೆ.