ಬೆಂಗಳೂರು: ಬಸ್, ಮೆಟ್ರೋ ಬಳಿಕ ಈಗ ಆಟೋ ದರವೂ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆಟೋ ದರ ಹೆಚ್ಚಳ ಮಾಡಬೇಕು ಎಂದು ಹಲವು ದಿನಗಳಿಂದ ಚಾಲಕರ ಬೇಡಿಕೆಯಿದೆ. ಪ್ರತೀ ಕಿ.ಮೀ.ಗೆ 10 ರೂ.ಗಳಷ್ಟು ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ 10 ರೂ. ಆಗಲ್ಲ 6 ರೂ. ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಇಟ್ಟಿದೆ.
ಇದೀಗ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಒಂದು ವೇಳೆ ರಾಜ್ಯ ಸರ್ಕಾರ ಇದನ್ನು ಒಪ್ಪಿದಲ್ಲಿ ರಾಜ್ಯದಲ್ಲಿ ಆಟೋ ದರವೂ ಹೆಚ್ಚಳವಾಗಲಿದೆ. ಈಗಾಗಲೇ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಶೇ.15 ರಷ್ಟು ಹೆಚ್ಚಳ ಮಾಡಿತ್ತು. ಇದೀಗ ಆಟೋ ದರವನ್ನೂ ಹೆಚ್ಚಳ ಮಾಡಿದರೆ ಆಟೋ ಹತ್ತುವುದೇ ಕಷ್ಟವಾಗಲಿದೆ ಎನ್ನುತ್ತಿದ್ದಾರೆ ಜನ.
ಈಗಲೇ ಆಟೋದವರು ಮೀಟರ್ ಹಾಕಲ್ಲ. ಅವರು ಕೇಳಿದಷ್ಟು ಕೊಡಬೇಕು. ಇನ್ನು, ದರವೂ ಹೆಚ್ಚಳ ಮಾಡಿದ್ರೆ ನಾವು ಬದುಕೋದು ಹೇಗೆ ಎನ್ನುವುದು ಜನ ಸಾಮಾನ್ಯರ ಅಭಿಪ್ರಾಯವಾಗಿದೆ.