ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಒಂದೊಂದೇ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಜನರಿಗೆ ಬರೆ ಎಳೆಯುತ್ತಲೇ ಇದೆ. ಬಸ್, ಹಾಲು, ಡೀಸೆಲ್, ವಿದ್ಯುತ್ ಬಳಿಕ ಈಗ ಇದೊಂದು ಬೆಲೆ ಏರಿಕೆ ಬಾಕಿಯಿದೆ.
ಮೊನ್ನೆಯಷ್ಟೇ ಹಾಲಿನ ಬೆಲೆ ಏರಿಕೆ ಮಾಡಿದ್ದ ಸರ್ಕಾರ ರೈತರಿಗೆ ಪ್ರೋತ್ಸಾಹ ಧನ ಕೊಡಲು ಬೆಲೆ ಏರಿಕೆ ಮಾಡುವುದಾಗಿ ಸಮಜಾಯಿಷಿ ಕೊಟ್ಟಿತ್ತು.ಇದಕ್ಕೆ ಮೊದಲು ಬಸ್ ದರ ಏರಿಕೆ ಮಾಡಿತ್ತು. ಇದರ ನಡುವೆ ವಿದ್ಯುತ್ ದರವನ್ನೂ ಏರಿಕೆ ಮಾಡಲಾಗಿತ್ತು. ಏಪ್ರಿಲ್ 1 ರಿಂದ ಬೆಂಗಳೂರಿಗರಿಗೆ ಕಸದ ಟ್ಯಾಕ್ಸ್ ವಿಧಿಸಲಾಗುತ್ತಿದೆ.
ಇದರ ನಡುವೆ ನಿನ್ನೆ ಡೀಸೆಲ್ ಮೇಲಿನ ಸುಂಕ ಹೆಚ್ಚಳ ಮಾಡಿ ಮತ್ತೊಂದು ಬರೆ ಹಾಕಿದೆ. ರಾಜ್ಯ ಸರ್ಕಾರದ ಬೆಲೆ ಏರಿಕೆ ಬರೆ ಇಲ್ಲಿಗೇ ನಿಂತಿಲ್ಲ. ಮುಂದಿನದ್ದು ಬೆಂಗಳೂರಿಗರಿಗೆ ನೀರಿನ ದರ ಏರಿಕೆ ಬಿಸಿ ತಗುಲಲಿದೆ.
ಸದನದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ನೀರಿಗೆ ಪ್ರತೀ ಲೀಟರ್ ಗೆ 1 ಪೈಸೆಯಷ್ಟು ಏರಿಕೆ ಮಾಡುವುದಾಗಿ ಹೇಳಿದ್ದರು. ಹೀಗಾಗಿ ಮುಂದಿನದ್ದು ಕಾವೇರಿ ನೀರಿನ ಸರದಿ. ಈ ಬಗ್ಗೆ ಸದ್ಯದಲ್ಲೇ ಸರ್ಕಾರ ಘೋಷಣೆ ಮಾಡಲಿದೆ. ಹೀಗಾಗಿ ಇನ್ನೊಂದು ಅಗತ್ಯವಸ್ತುವಿನ ಬೆಲೆ ಏರಿಕೆಗೆ ಜನ ಸಿದ್ಧರಾಗಬೇಕಿದೆ.