ಬೆಂಗಳೂರು: ಏಪ್ರಿಲ್ 1 ರಿಂದ ರಾಜ್ಯದ ಜನರ ಕಿಸೆಗೆ ವಿವಿಧ ರೂಪದಲ್ಲಿ ಹೆಚ್ಚುವರಿ ಕತ್ತರಿ ಬೀಳಲಿದೆ. ಇಂದಿನಿಂದ ಹಾಲು, ಮೊಸರು, ವಿದ್ಯುತ್, ಕಸವೂ ದುಬಾರಿಯಾಗಲಿದೆ.
ನಂದಿನಿ ಹಾಲು, ಮೊಸರು ದರ ಏರಿಕೆ
ರಾಜ್ಯ ಸರ್ಕಾರ ಕಳೆದ ವಾರವಷ್ಟೇ ನಂದಿನಿ ಹಾಲು ಮತ್ತು ಮೊಸರಿಗೆ ಪ್ರತೀ ಲೀಟರ್ ಗೆ 4 ರೂ. ಏರಿಕೆ ಮಾಡಿ ಘೋಷಣೆ ಮಾಡಿತ್ತು. ಅದು ಇಂದಿನಿಂದ ಜಾರಿಗೆ ಬರಲಿದೆ. ಇಂದಿನಿಂದ ನೀಲಿ ಪ್ಯಾಕೆಟ್ ಪ್ರತೀ ಲೀಟರ್ ಹಾಲಿನ ಬೆಲೆ 56 ರೂ. ಆಗಲಿದೆ. ಇನ್ನು ಮೊಸರಿಗೆ 54 ರೂ. ಆಗಲಿದೆ.
ವಿದ್ಯುತ್ ದರ ಏರಿಕೆ
ಪ್ರತೀ ತಿಂಗಳು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಇಂದಿನಿಂದ ವಿದ್ಯುತ್ ದರವೂ ಹೆಚ್ಚಳವಾಗಲಿದೆ. ಪ್ರತೀ ಯೂನಿಟ್ ಗೆ 36 ಪೈಸೆ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು ಅದು ಇಂದಿನಿಂದ ಜಾರಿಗೆ ಬರಲಿದೆ. ಉಚಿತ ಯೋಜನೆಯ ಫಲಾನುಭವಿಗಳಿಗೆ ಎಂದಿನಂತೆ ದರವಿರಲಿದೆ.
ಕಸಕ್ಕೂ ಟ್ಯಾಕ್ಸ್
ಇದೀಗ ರಾಜ್ಯ ಸರ್ಕಾರ ಬೆಂಗಳೂರಿಗರಿಗೆ ಕಸಕ್ಕೂ ಟ್ಯಾಕ್ಸ್ ವಿಧಿಸುವ ಮೂಲಕ ಜೇಬಿಗೆ ಕತ್ತರಿ ಹಾಕಿದೆ. ಇಂದಿನಿಂದ ನಿಮ್ಮ ಮನೆ ತೆರಿಗೆ, ಆಸ್ತಿ ತೆರಿಗೆಯಂತೆ ಕಸಕ್ಕೂ ಟ್ಯಾಕ್ಸ್ ನೀಡಬೇಕಾಗುತ್ತದೆ. ಇದು ಆಸ್ತಿ ತೆರಿಗೆಯ ಜೊತೆ ಪಾವತಿ ಮಾಡಬೇಕಾಗುತ್ತದೆ.