ನ್ಯೂಯಾರ್ಕ್: ತನ್ನ ಮಾತು ಕೇಳದ ಹೊಟ್ಟೆಉರಿಗೆ ಭಾರತದ ಮೇಲೆ ಶೇ.50 ರಷ್ಟು ಟಾರಿಫ್ ವಿಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಮೋದಿ ಬೆಂಬಲಿಸಿದ್ದಕ್ಕೆ ಸರಿಯಾಗಿಯೇ ಮಾಡಿದ್ರು ಎಂದಿದ್ದಾರೆ.
ಈ ಹಿಂದೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುತೇಕ ಭಾರತೀಯರು ಟ್ರಂಪ್ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಆಶಿಸಿದ್ದರು. ಇದಕ್ಕೆ ಕಾರಣ ಮೊದಲನೆಯ ಅವಧಿಯಲ್ಲಿ ಟ್ರಂಪ್ ಅಧಿಕಾರದಲ್ಲಿದ್ದಾಗ ಪ್ರಧಾನಿ ಮೋದಿ ಮತ್ತು ಭಾರತದ ಜೊತೆಗಿದ್ದ ಉತ್ತಮ ಬಾಂಧವ್ಯ.
ಮೊದಲನೆಯ ಅವಧಿಯಲ್ಲಿ ಅಧ್ಯಕ್ಷರಾಗಿದ್ದಾಗ ಟ್ರಂಪ್ ಭಾರತ ಪ್ರವಾಸ ಮಾಡಿದ್ದರು. ಈ ವೇಳೆ ಅಹಮ್ಮದಾಬಾದ್ ಮೈದಾನದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೋದಿ ಮತ್ತು ಟ್ರಂಪ್ ಪರಸ್ಪರ ಆಲಂಗಿಸಿಕೊಂಡಿದ್ದರು. ಮೋದಿ ನನ್ನ ಬೆಸ್ಟ್ ಫ್ರೆಂಡ್ ಎಂದು ಟ್ರಂಪ್ ಹೊಗಳಿದ್ದರು. ಅಮೆರಿಕಾಗೆ ತೆರಳಿದ್ದ ಮೋದಿಗೂ ಟ್ರಂಪ್ ಅಂತಹದ್ದೇ ಭವ್ಯ ಸ್ವಾಗತ ನೀಡಿದ್ದರು. ಭಾರತ ನನ್ನ ಸ್ನೇಹಿತ ರಾಷ್ಟ್ರ ಎಂದಿದ್ದರು.
ಈ ಬಾರಿ ಅಧ್ಯಕ್ಷೀಯ ಚುನಾವಣೆ ವೇಳೆಯೂ ಭಾರತ ತನ್ನ ಮಿತ್ರ ರಾಷ್ಟ್ರ, ಮೋದಿ ನನ್ನ ಸ್ನೇಹಿತ ಎಂದೇ ಟ್ರಂಪ್ ಪಠಿಸುತ್ತಿದ್ದರು. ಆದರೆ ಈಗ ಅಧಿಕಾರಕ್ಕೆ ಬಂದ ಮೇಲೆ ಭಾರತದ ವಿರುದ್ಧ ಕೆಂಡ ಕಾರಲು ಶುರು ಮಾಡಿದ್ದಾರೆ. ರಷ್ಯಾ ಜೊತೆಗೆ ಭಾರತದ ಸ್ನೇಹ ಟ್ರಂಪ್ ನಿದ್ದೆಗೆಡಿಸಿದೆ. ಹೀಗಾಗಿ ಭಾರತಕ್ಕೇ ಗುನ್ನಾ ಇಡುತ್ತಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮೋದಿ ಅಬ್ ಕೀ ಬಾರ್ ಟ್ರಂಪ್ ಕೀ ಸರ್ಕಾರ್ ಎಂದಿದ್ದೇ ಬಂತು. ಟ್ರಂಪ್ ಮಾತ್ರ ಭಾರತಕ್ಕೇ ಚೂರಿ ಹಾಕಿದರು ಎನ್ನುತ್ತಿದ್ದಾರೆ. ತನ್ನ ಮಾತು ಕೇಳದವರ ವಿರುದ್ಧ ಎಲ್ಲಾ ಅಮೆರಿಕಾ ಈ ರೀತಿ ಸುಂಕ ಹೆಚ್ಚು ಮಾಡುತ್ತಿದ್ದರೆ ಮುಂದೆ ಅಮೆರಿಕಾವೇ ಏಕಾಂಗಿಯಾಗಬೇಕಾದೀತು. ಉಳಿದೆಲ್ಲಾ ರಾಷ್ಟ್ರಗಳು ಅಮೆರಿಕಾ ವಿರುದ್ಧ ತಿರುಗಿಬೀಳಬಹುದು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.