ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಉದ್ಯಾನವನ ಲಾಲ್ ಭಾಗ್ ಗೆ ಭೇಟಿ ಕೊಡಬೇಕೆಂದಿದ್ದರೆ ಇಂದಿನಿಂದ ಬೆಸ್ಟ್ ಟೈಂ. ಯಾಕೆ ಗೊತ್ತಾ? ಇಲ್ಲಿದೆ ವಿವರ.
ಲಾಲ್ ಭಾಗ್ ನಲ್ಲಿ ಇಂದಿನಿಂದ ಸ್ವಾತಂತ್ರ್ಯೋತ್ಸವದ ನಿಮಿತ್ತ ಫಲಪುಷ್ಪ ಪ್ರದರ್ಶನ ಆರಂಭವಾಗಲಿದೆ. ಇಂದು ಸಿಎಂ ಸಿದ್ದರಾಮಯ್ಯ ಈ ವರ್ಷದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಇದು 218 ನೇ ಫಲಪುಷ್ಪ ಪ್ರದರ್ಶನವಾಗಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಆಸ್ಥಾನದ ಪರಿಕಲ್ಪನೆಯಲ್ಲಿ ಫಲಪುಷ್ಪ ಪ್ರದರ್ಶನ ವಿನ್ಯಾಸ ಮಾಡಲಾಗುತ್ತಿರುವುದು ವಿಶೇಷವಾಗಿದೆ. ಇದಕ್ಕಾಗಿ ಕರ್ನಾಟಕ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶ, ಕೇರಳ, ತಮಿಳುನಾಡಿನಿಂದಲೂ ಹೂಗಳನ್ನು ತರಿಸಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಕೃತಿ, ಆಸ್ಥಾನದ ಕೋಟೆ, ಐಕ್ಯ ಮಂಟಪಗಳ ಪ್ರತಿಕೃತಿಗಳನ್ನು ಹೂವಿನಿಂದಲೇ ನಿರ್ಮಾಣ ಮಾಡಲಾಗಿದೆ. ಇಂದಿನಿಂದ ಆಗಸ್ಟ್ 18 ರವರೆಗೂ ಪ್ರದರ್ಶನವಿರಲಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ., ರಜಾ ದಿನಗಳಲ್ಲಿ 100 ರೂ. ಮತ್ತು ಮಕ್ಕಳಿಗೆ 30 ರೂ. ಎಂಟ್ರಿ ಶುಲ್ಕ ನಿಗದಿಪಡಿಸಲಾಗಿದೆ.