ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಸೈಕ್ಲೋನ್ ಪರಿಣಾಮವೂ ಸೇರಿ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಈ ಮಳೆಯ ಅಬ್ಬರ ಇನ್ನೆಷ್ಟು ದಿನವಿರಲಿದೆ ಇಲ್ಲಿದೆ ವಿವರ.
ಸೋಮವಾರದಿಂದ ತೊಡಗಿ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಇದಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಕೂಡಾ ಹೊರತಲ್ಲ. ಕರಾವಳಿ ಜಿಲ್ಲೆಗಳಲ್ಲಂತೂ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಹವಾಮಾನ ವರದಿಗಳ ಪ್ರಕಾರ ಮಳೆಯ ಅಬ್ಬರ ಇಂದಿನವರೆಗೂ ಇರಲಿದೆ. ನಾಳೆಯಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಬಹುದಾದರೂ ಭಾನುವಾರ ಮತ್ತೆ ಭಾರೀ ಮಳೆಯಾಗುವ ಸಂಭವವಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಗ್ರಾಮಾಂತರ ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಾಳೆಯವರೆಗೂ ಭಾರೀ ಮಳೆಯ ಸೂಚನೆಯಿದೆ. ಕರಾವಳಿ ಜಿಲ್ಲೆಗಳು, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇಂದಿನವರೆಗೂ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಉಳಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ವಿಜಯನಗರ, ದಾವಣಗೆರೆ, ಕೊಪ್ಪಳ, ಕಲಬುರಗಿ,ಹಾವೇರಿ, ರಾಯಚೂರು, ಗದಗ, ಧಾರವಾಡ, ಯಾದಗಿರಿ, ಬೆಂಗಳೂರು ನಗರ ಜಿಲ್ಲೆಗಳಿಗೆ ಇಂದಿನವರೆಗೂ ಯೆಲ್ಲೊ ಅಲರ್ಟ್ ಘೋಷಣೆಯಾಗಿದೆ.